ಉತ್ತರ ಪ್ರದೇಶ | ಕಾನೂನು ಪದವಿ ವಿದ್ಯಾರ್ಥಿಗೆ 50-60 ಬಾರಿ ಕಪಾಳ ಮೋಕ್ಷ ಮಾಡಿದ ಸಹಪಾಠಿಗಳು!
ತಡವಾಗಿ ಬೆಳಕಿಗೆ ಬಂದ ಪ್ರಕರಣ
Screengrab \ X
ಲಕ್ನೊ: ಲಕ್ನೊದ ಅಮಿಟಿ ವಿಶ್ವವಿದ್ಯಾಲಯದ ಎರಡನೆ ವರ್ಷದ ಕಾನೂನು ಪದವಿ ವಿದ್ಯಾರ್ಥಿಯೊಬ್ಬನಿಗೆ ಕಳೆದ ತಿಂಗಳು ಆತನ ಸಹಪಾಠಿಗಳು 50-60 ಬಾರಿ ಕಪಾಳ ಮೋಕ್ಷ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸಂತ್ರಸ್ತ ವಿದ್ಯಾರ್ಥಿಯನ್ನು ಶಿಖರ್ ಮುಕೇಶ್ ಕೇಸರ್ವಾನಿ ಎಂದು ಗುರುತಿಸಲಾಗಿದ್ದು, ಆಗಸ್ಟ್ 26ರಂದು ಆತ ತನ್ನ ಸ್ನೇಹಿತೆಯೊಂದಿಗೆ ತರಗತಿಗಳಿಗೆ ಹಾಜರಾಗಲು ವಾಹನವೊಂದರಲ್ಲಿ ಬಂದಿದ್ದಾಗ ಈ ಘಟನೆ ನಡೆದಿತ್ತು ಎಂದು ಹೇಳಲಾಗಿದೆ. ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಈ ಹಲ್ಲೆಗೆ ಕಾರಣವೇನು ಎಂಬ ಸಂಗತಿ ತಕ್ಷಣಕ್ಕೆ ತಿಳಿದು ಬಂದಿಲ್ಲ. ಈ ಕುರಿತು ಅಮಿಟಿ ವಿಶ್ವವಿದ್ಯಾಲಯ ಕೂಡಾ ಯಾವುದೇ ತಕ್ಷಣದ ಹೇಳಿಕೆ ನೀಡಿಲ್ಲ.
ಶಿಖರ್ ಮುಕೇಶ್ ಕೇಸರ್ವಾನಿಯ ತಂದೆ ದಾಖಲಿಸಿರುವ ದೂರಿನನ್ವಯ, ಆಯುಷ್ ಯಾದವ್, ಜಾಹ್ನವಿ ಮಿಶ್ರಾ, ಮಿಲಯ್ ಬ್ಯಾನರ್ಜಿ, ವಿವೇಕ್ ಸಿಂಗ್ ಹಾಗೂ ಆರ್ಯಮಾನ್ ಶುಕ್ಲಾ ವಿರುದ್ಧ ಪೊಲೀಸರು ಪ್ರಾಥಮಿಕ ಮಾಹಿತಿ ವರದಿ ದಾಖಲಿಸಿಕೊಂಡಿದ್ದಾರೆ.
ಮಾಲ್ಹೌರ್ ನಲ್ಲಿರುವ ವಿಶ್ವವಿದ್ಯಾಲಯದಲ್ಲಿ ಬಿಎ ಎಲ್ಎಲ್ ಬಿ ವ್ಯಾಸಂಗ ಮಾಡುತ್ತಿರುವ ನನ್ನ ಪುತ್ರನು ಈ ಹಲ್ಲೆಯಿಂದ ಖಿನ್ನನಾಗಿದ್ದು, ಮುಂದೆ ಕಾಲೇಜಿಗೆ ಹಾಜರಾಗದ ಸ್ಥಿತಿಯಲ್ಲಿದ್ದಾನೆ ಎಂದು ಸಂತ್ರಸ್ತ ವಿದ್ಯಾರ್ಥಿಯ ತಂದೆ ಆರೋಪಿಸಿದ್ದಾರೆ.
ಆಗಸ್ಟ್ 26ರಂದು ನನ್ನ ಪುತ್ರ ಶಿಖರ್ ಮುಕೇಶ್ ಕೇಸರ್ವಾನಿ ಕಾಲೇಜಿಗೆ ತೆರಳುತ್ತಿದ್ದಾಗ, ಮಾರ್ಗಮಧ್ಯದಲ್ಲಿ ಹನ್ಹೆಮನ್ ಚೌರಾಹ ಬಳಿ ಆತನ ಸ್ನೇಹಿತೆ ಸೌಮ್ಯ ಸಿಂಗ್ ಯಾದವ್ ಎಂಬಾಕೆ ಆತನನ್ನು ತನ್ನ ವಾಹನದಲ್ಲಿ ಕಾಲೇಜಿಗೆ ಕರೆದುಕೊಂಡು ಬಂದಿದ್ದಳು ಎಂದು ಶಿಖರ್ ಮುಕೇಶ್ ಕೇಸರ್ವಾನಿಯ ತಂದೆ ಮಾಹಿತಿ ನೀಡಿದ್ದಾರೆ.
ಅವರು ಕ್ಯಾಂಪಸ್ ನ ವಾಹನ ನಿಲುಗಡೆ ತಾಣವನ್ನು ತಲುಪಿದಾಗ, ಶಿಖರ್ ಮುಕೇಶ್ ಕೇಸರ್ವಾನಿ ಬಳಿಗೆ ಬಂದಿರುವ ಆರೋಪಿ ವಿದ್ಯಾರ್ಥಿಗಳು ನಾವು ನಿನ್ನೊಂದಿಗೆ ಸ್ವಲ್ಪ ಮಾತನಾಡಬೇಕಿದೆ ಎಂದು ಆತನ ಬಳಿ ಹೇಳಿದ್ದಾರೆ. ಬಳಿಕ ಸೌಮ್ಯಳ ವಾಹನವನ್ನು ಪ್ರವೇಶಿಸಿರುವ ಆರೋಪಿಗಳು ಮುಂದಿನ 45 ನಿಮಿಷಗಳ ಕಾಲ ಬೆದರಿಕೆ ಒಡ್ಡಿ, ಮೌಖಿಕ ನಿಂದನೆ ಮಾಡಿದರು” ಎಂದು ಸಂತ್ರಸ್ತ ಶಿಖರ್ ಮುಕೇಶ್ ಕೇಸರ್ವಾನಿಯ ತಂದೆ ಆರೋಪಿಸಿದ್ದಾರೆ.
“ನನ್ನ ಪುತ್ರ ಆಗಸ್ಟ್ 11ರಂದು ಅಸ್ಥಿಮಜ್ಜೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದುದರಿಂದ, ಆತನ ಊರುಗೋಲಿನ ನೆರವಿನಿಂದ ನಡೆದಾಡುತ್ತಿದ್ದ. ಆತನ ಕೆನ್ನೆಗೆ 50-60 ಬಾರಿ ಬಾರಿಸಿರುವ ಆಯುಷ್ ಯಾದವ್ ಹಾಗೂ ಜಾಹ್ನವಿ ಮಿಶ್ರಾ, ಆತನಿಗೆ ಹಾಗೂ ನಮಗೆ ನಿಂದಿಸಿದ್ದಾರೆ. ಆತನಿಗೆ ಕೊಲೆ ಬೆದರಿಕೆಯನ್ನೂ ಒಡ್ಡಿದ್ದಾರೆ” ಎಂದು ಅವರು ದೂರಿದ್ದಾರೆ.
ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ದೂರುದಾರರು ಆಗ್ರಹಿಸಿದ್ದಾರೆ.