×
Ad

ಜೀತದಾಳುವಾಗಿದ್ದ ಬುಡಕಟ್ಟು ಮಹಿಳೆ ಈಗ ಪಂಚಾಯತ್ ಅಧ್ಯಕ್ಷೆ; ಪ್ರಜಾಪ್ರಭುತ್ವದ ಮಹಿಮೆ!

Update: 2025-12-20 20:37 IST

Photo Credit : thenewsminute.com

ಹೈದರಾಬಾದ್, ಡಿ. 20: ಜೀತದಾಳುವಾಗಿದ್ದ ಬುಡಕಟ್ಟು ಮಹಿಳೆ ಪುರುಸಾಲ ಲಿಂಗಮ್ಮ ಈಗ ಗ್ರಾಮ ಸರಪಂಚರಾಗಿ ಆಯ್ಕೆಯಾಗಿದ್ದು, ಅವರ ಬದುಕು ಸಂಪೂರ್ಣ ಬದಲಾಗಿದೆ.

ತೆಲಂಗಾಣ ರಾಜ್ಯದ ನಾಗರ್‌ಕರ್ನೂಲ್ ಜಿಲ್ಲೆಯ ಚೆಂಚು ಬುಡಕಟ್ಟು ಮಹಿಳೆ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಅಮರಗಿರಿ ಗ್ರಾಮದ ಸರಪಂಚರಾಗಿ ಆಯ್ಕೆಯಾಗಿದ್ದಾರೆ.

ಈಗ 40 ವರ್ಷ ದಾಟಿರುವ ಅನಕ್ಷರಸ್ತೆ ಲಿಂಗಮ್ಮ ನಾಗರ್‌ಕರ್ನೂಲ್ ಜಿಲ್ಲೆಯ ನಲ್ಲಮಾಲ ಕಾಡಿನಲ್ಲಿ ತನ್ನ ಬಾಲ್ಯದಿಂದಲೂ ದಶಕಗಳ ಕಾಲ ಜೀತದಾಳು ಆಗಿದ್ದರು. ಕೆಲವು ವರ್ಷಗಳ ಹಿಂದೆ ಸರಕಾರಿ ಅಧಿಕಾರಿಗಳು ಅವರನ್ನು ರಕ್ಷಿಸಿದರು.

ಶೋಷಕರು ತಮಗೆ ಉಚಿತವಾಗಿ ಮೀನುಹಿಡಿಯುವ ಬಲೆಗಳನ್ನು ಒದಗಿಸಿದ್ದರು. ಅದಕ್ಕಾಗಿ ನಾನು ಮತ್ತು ನನ್ನ ಕುಟುಂಬದ ಇತರ ಸದಸ್ಯರು ಅವರ ಜೀತದಾಳುಗಳಾಗಿ ಮೀನು ಹಿಡಿಯಲು ಹೋಗುತ್ತಿದ್ದೆವು ಎಂದು ಲಿಂಗಮ್ಮ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಹೇಳಿದರು.

ಜೀತವು ಅವರ ಹೆತ್ತವರಿಂದಲೇ ಆರಂಭವಾಗಿತ್ತು. ‘‘ನಾವು ಅವರಿಗೆ ಎಷ್ಟು ಹಣ ಮರಳಿಸಬೇಕಾಗಿತ್ತು ಎನ್ನುವುದು ಕೂಡ ನಮಗೆ ಗೊತ್ತಿರಲಿಲ್ಲ. ಅವರು ನಮಗೆ ಬಲೆಗಳನ್ನು ಒದಗಿಸುತ್ತಿದ್ದರು ಮತ್ತು ನಾವು ಮೀನು ಹಿಡಿಯಲು ಹೋಗಬೇಕಾಗಿತ್ತು. ಆ ದಿನಗಳಲ್ಲಿ ನಮಗೆ ತಿನ್ನಲು ಆಹಾರ ಕೂಡ ಇರಲಿಲ್ಲ’’ ಎಂದು ಅವರು ಪಿಟಿಐಗೆ ತಿಳಿಸಿದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ, ಸುಮಾರು 300 ಜನಸಂಖ್ಯೆಯಿರುವ ತನ್ನ ಗ್ರಾಮವನ್ನು ಪರಿಶಿಷ್ಟ ಪಂಗಡಕ್ಕಾಗಿ ಮೀಸಲಾಗಿರಿಸಲಾಗಿದೆ.

ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸ್ಥಳೀಯರು ಮತ್ತು ಅಧಿಕಾರಿಗಳು ಅವರನ್ನು ಪ್ರೇರೇಪಿಸಿದರು. ಆದರೆ, ಅವರ ವಿರುದ್ಧ ಸ್ಪರ್ಧಿಸಿದ್ದು ಸ್ವತಃ ಅವರ ತಮ್ಮ. ಬೇರೆ ಅಭ್ಯರ್ಥಿಗಳು ಸ್ಪರ್ಧೆಯಲ್ಲಿ ಇರಲಿಲ್ಲ. ಲಿಂಗಮ್ಮ ಗೆದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News