ಮಧ್ಯಪ್ರದೇಶದ ಟ್ರೈನೀ ಪೊಲೀಸರಿಗೆ ‘ದಕ್ಷಿಣಮೂರ್ತಿ ಶ್ಲೋಕ’ದೊಂದಿಗೆ ದಿನ ಆರಂಭಿಸಲು ಸೂಚನೆ
File Photo (credit: NDTV)
ಭೋಪಾಲ್: ಮಧ್ಯಪ್ರದೇಶದ ಎಲ್ಲಾ ಪೊಲೀಸ್ ತರಬೇತಿ ಶಾಲೆಗಳಲ್ಲಿ ದಿನದ ಆರಂಭವನ್ನು ದಕ್ಷಿಣಮೂರ್ತಿ ಶ್ಲೋಕದ ಪಠಣದೊಂದಿಗೆ ಪ್ರಾರಂಭಿಸಲು ಪೊಲೀಸ್ ತರಬೇತಿ ವಿಭಾಗ ನೀಡಿರುವ ಹೊಸ ನಿರ್ದೇಶನ ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ತರಬೇತಿ) ರಾಜಾ ಬಾಬು ಸಿಂಗ್ ಹೊರಡಿಸಿದ ಆದೇಶದ ಪ್ರಕಾರ, ರಾಜ್ಯದ ಎಲ್ಲಾ ಪೊಲೀಸ್ ತರಬೇತಿ ಶಾಲೆಗಳು (PTS) ತಮ್ಮ ತರಬೇತಿ ಕ್ಯಾಂಪಸ್ ಗಳಲ್ಲಿ ಸ್ಥಾಪಿಸಲಾದ ಧ್ವನಿವರ್ಧಕಗಳ ಮೂಲಕ ದಕ್ಷಿಣಮೂರ್ತಿ ಶ್ಲೋಕವನ್ನು ನುಡಿಸುವ ಮೂಲಕ ದಿನವನ್ನು ಆರಂಭಿಸಬೇಕು. ಇದರಿಂದ ತರಬೇತುದಾರರು ಮತ್ತು ಟ್ರೈನಿಗಳು ದಿನದ ತರಬೇತಿ ಆರಂಭಕ್ಕೂ ಮೊದಲು ಆ ಶ್ಲೋಕಗಳನ್ನು ಕೇಳುವಂತಾಗುತ್ತದೆ.
ಎಲ್ಲಾ ತರಬೇತಿ ಕೇಂದ್ರಗಳಿಗೆ ಕಳುಹಿಸಿದ ಸಂದೇಶದಲ್ಲಿ ರಾಜಾ ಬಾಬು ಸಿಂಗ್, ಶಿಸ್ತುಬದ್ಧ ಮತ್ತು ಕರುಣಾಳು ಪೊಲೀಸ್ ಪಡೆ ರೂಪಿಸಲು ಇಂತಹ ಮೌಲ್ಯಗಳು ಅಗತ್ಯವೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
“ಜ್ಞಾನವು ಕೇವಲ ಮಾಹಿತಿಯ ಸಂಗ್ರಹಣೆಯಲ್ಲ. ಪೊಲೀಸ್ ಅಧಿಕಾರಿಗೆ ವಿವೇಕ, ಬುದ್ಧಿವಂತಿಕೆ, ಸಹಾನುಭೂತಿ ಮತ್ತು ಸೂಕ್ಷ್ಮತೆಯೂ ಅಗತ್ಯ,” ಎಂದು ಸಿಂಗ್ ತಿಳಿಸಿದ್ದಾರೆ. ದಕ್ಷಿಣಾಮೂರ್ತಿ ಶ್ಲೋಕಗಳು ಕ್ಯಾಂಪಸ್ನಾದ್ಯಂತ ಪ್ರತಿಧ್ವನಿಸಿದಾಗ, ಟ್ರೈನಿಗಳು ಆಳವಾದ ತಿಳುವಳಿಕೆ ಮತ್ತು ನೈತಿಕ ಸ್ಪಷ್ಟತೆಯನ್ನು ಅಳವಡಿಸಿಕೊಳ್ಳುತ್ತಾರೆ. ಇದರಿಂದ ಅವರು ಕೇವಲ ನುರಿತ ವೃತ್ತಿಪರರಷ್ಟೇ ಅಲ್ಲದೆ ಜವಾಬ್ದಾರಿಯುತ ಮತ್ತು ಮಾನವೀಯ ಅಧಿಕಾರಿಗಳಾಗಿ ಹೊರಹೊಮ್ಮುತ್ತಾರೆ ಎಂದು ಅವರು ಹೇಳಿದ್ದಾರೆ.
ಪೊಲೀಸ್ ತರಬೇತಿ ಕ್ಯಾಂಪಸ್ ಗಳಲ್ಲಿ ಈಗಾಗಲೇ ಧ್ವನಿವರ್ಧಕಗಳನ್ನು ಸ್ಥಾಪಿಸಿರುವುದರಿಂದ, ಇಡೀ ತರಬೇತಿಯ ಪರಿಸರವು ಶ್ಲೋಕದ ಧ್ವನಿಯಿಂದ ಪ್ರತಿಧ್ವನಿಸುವಂತೆ ದಿನದ ಆರಂಭದಲ್ಲಿ ಅದನ್ನು ನುಡಿಸಬೇಕು ಎಂದು ನಿರ್ದೇಶನದಲ್ಲಿ ತಿಳಿಸಲಾಗಿದೆ.
ಪೊಲೀಸ್ ತರಬೇತಿ ವಿಭಾಗವು ಧಾರ್ಮಿಕ ಮತ್ತು ತಾತ್ವಿಕ ಪಠ್ಯಗಳನ್ನು ಒಳಗೊಂಡ ಇಂತಹ ಉಪಕ್ರಮಗಳನ್ನು ಪರಿಚಯಿಸಿದಾಗಿನಿಂದಲೇ ರಾಜಕೀಯ ವಿವಾದ ಹುಟ್ಟಿಕೊಂಡಿದೆ. ಇತ್ತೀಚಿನ ಆದೇಶವು ಆ ಚರ್ಚೆಯನ್ನು ಮತ್ತೊಮ್ಮೆ ತೀವ್ರಗೊಳಿಸಿದೆ.
ಕಳೆದ ವರ್ಷ ಇಲಾಖೆಯು ಎಂಟು ಪೊಲೀಸ್ ತರಬೇತಿ ಶಾಲೆಗಳಲ್ಲಿ ಟ್ರೈನಿಗಳು ರಾತ್ರಿ ಧ್ಯಾನ ಅವಧಿಗಳ ಮೊದಲು ಭಗವದ್ಗೀತೆಯ ಒಂದು ಅಧ್ಯಾಯವನ್ನು ಓದಲು ಸೂಚಿಸಿತ್ತು. ತುಳಸಿದಾಸರ ರಾಮಚರಿತಮಾನಸದ ಶ್ಲೋಕಗಳನ್ನು ಪಠಿಸಲು ಪ್ರೋತ್ಸಾಹಿಸುವ ಮತ್ತೊಂದು ನಿರ್ದೇಶನದ ನಂತರ ಈ ಕ್ರಮ ಜಾರಿಯಾಗಿತ್ತು. ಸುಮಾರು 4,000 ಪೊಲೀಸ್ ಪ್ರಶಿಕ್ಷಣಾರ್ಥಿಗಳಲ್ಲಿ ನೈತಿಕ ಶಿಸ್ತು ಮತ್ತು ಚಿಂತನೆಯ ಸ್ಪಷ್ಟತೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚಿನ ಆದೇಶವನ್ನು ವಿರೋಧ ಪಕ್ಷ ಕಾಂಗ್ರೆಸ್ ಟೀಕಿಸಿದೆ. ಪೊಲೀಸ್ ತರಬೇತಿ ಸಂಸ್ಥೆಗಳಲ್ಲಿ ಇಂತಹ ಅಭ್ಯಾಸಗಳನ್ನು ಪರಿಚಯಿಸುವುದರಿಂದ ರಾಜ್ಯ ಸಂಸ್ಥೆಗಳ ತಟಸ್ಥತೆಯ ಬಗ್ಗೆ ಕಳವಳ ವ್ಯಕ್ತವಾಗುತ್ತದೆ ಎಂದು ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತಾ ಹೇಳಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ಜವಾಬ್ದಾರಿಯುತ ಸಂಸ್ಥೆಗಳು ಎಲ್ಲಾ ನಾಗರಿಕರನ್ನು ಸಮಾನವಾಗಿ ಪರಿಗಣಿಸುವ ಸಂವಿಧಾನಿಕ ಮೌಲ್ಯಗಳನ್ನು ಪ್ರತಿಬಿಂಬಿಸಬೇಕು. ಒಂದು ನಂಬಿಕೆ ವ್ಯವಸ್ಥೆಯನ್ನು ಉತ್ತೇಜಿಸುವಂತೆ ಕಂಡುಬರುವ ಯಾವುದೇ ಕ್ರಮ ಸಾರ್ವಜನಿಕ ಸಂಸ್ಥೆಗೆ ಸೂಕ್ತವಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಆಡಳಿತಾರೂಢ ಬಿಜೆಪಿ ಈ ಉಪಕ್ರಮವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದು, ವಿರೋಧ ಪಕ್ಷವು ಸಾಂಸ್ಕೃತಿಕ ಮತ್ತು ತಾತ್ವಿಕ ವ್ಯಾಯಾಮವನ್ನು ರಾಜಕೀಯಗೊಳಿಸುತ್ತಿದೆ ಎಂದು ಆರೋಪಿಸಿದೆ.
ಭಗವದ್ಗೀತೆ ಮತ್ತು ದಕ್ಷಿಣಮೂರ್ತಿ ಶ್ಲೋಕದಂತಹ ಪಠ್ಯಗಳು ಪಂಥೀಯ ಧರ್ಮಕ್ಕಿಂತ ಹೆಚ್ಚಾಗಿ ಜ್ಞಾನ, ಶಿಸ್ತು ಮತ್ತು ಕರ್ತವ್ಯದಂತಹ ಸಾರ್ವತ್ರಿಕ ತಾತ್ವಿಕ ವಿಚಾರಗಳನ್ನು ಪ್ರತಿನಿಧಿಸುತ್ತವೆ ಎಂದು ಬಿಜೆಪಿ ವಕ್ತಾರ ಪಂಕಜ್ ಚತುರ್ವೇದಿ ಹೇಳಿದ್ದಾರೆ.
“ಭಾರತದಂತಹ ದೇಶದಲ್ಲಿ ಭಗವದ್ಗೀತೆ ಅಥವಾ ಇಂತಹ ತಾತ್ವಿಕ ಸಂಪ್ರದಾಯಗಳನ್ನು ಕೋಮುವಾದ ಎಂದು ಕರೆಯಲು ಆರಂಭಿಸಿದರೆ, ಅದು ಭಾರತದ ನಾಗರಿಕತೆಯ ನೀತಿಯ ಬಗ್ಗೆ ಅವರ ತಿಳುವಳಿಕೆಯನ್ನು ಪ್ರಶ್ನಿಸುತ್ತದೆ,” ಎಂದು ಅವರು ಹೇಳಿದ್ದಾರೆ. ಇಂತಹ ಬೋಧನೆಗಳು ಪೊಲೀಸ್ ಸಿಬ್ಬಂದಿಯಲ್ಲಿ ನೈತಿಕ ಸ್ಪಷ್ಟತೆಯನ್ನು ಬೆಳೆಸಲು ಮತ್ತು ಸಮಾಜಕ್ಕೆ ಉತ್ತಮ ಸೇವೆ ನೀಡಲು ಸಹಾಯ ಮಾಡುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.
ಪೊಲೀಸ್ ಸಂಸ್ಥೆಯೊಳಗಿನ ಕೆಲವರು ಈ ಉಪಕ್ರಮವನ್ನು ಸಮರ್ಥಿಸಿಕೊಂಡಿದ್ದು, ತರಬೇತಿ ಕಾರ್ಯಕ್ರಮಗಳಲ್ಲಿ ಈಗಾಗಲೇ ಯೋಗ, ಧ್ಯಾನ ಮತ್ತು ಮಾನಸಿಕ ಸ್ಥೈರ್ಯಾಭ್ಯಾಸಗಳನ್ನು ಸೇರಿಸಲಾಗಿದೆ ಎಂದು ಹೇಳಿದ್ದಾರೆ. ಶ್ಲೋಕ ಪಠಣವು ಧಾರ್ಮಿಕ ಆಚರಣೆಯನ್ನು ಜಾರಿಗೊಳಿಸುವುದಕ್ಕಿಂತ ನೈತಿಕ ಚಿಂತನೆಗೆ ಉತ್ತೇಜನ ನೀಡುವ ಉದ್ದೇಶ ಹೊಂದಿದೆ ಎಂದು ಅವರು ಹೇಳಿದ್ದಾರೆ.