ಮಹಾರಾಷ್ಟ್ರದ ಗಡ್ಚಿರೋಳಿಯಲ್ಲಿ 11 ಮಾವೋವಾದಿಗಳು ಶರಣು
Photo Credit : X @airnewsalerts
ಮುಂಬೈ, ಡಿ. 10: ಹನ್ನೊಂದು ಮಾವೋವಾದಿ ಕಮಾಂಡರ್‌ಗಳು ಮತ್ತು ಸದಸ್ಯರು ಬುಧವಾರ ಮಹಾರಾಷ್ಟ್ರ ಪೊಲೀಸ್ ಮುಖ್ಯಸ್ಥೆ ರಶ್ಮಿ ಶುಕ್ಲಾ ಸಮ್ಮುಖದಲ್ಲಿ ರಾಜ್ಯದ ಗಡ್ಚಿರೋಳಿಯಲ್ಲಿ ಶರಣಾಗಿದ್ದಾರೆ.
ಅವರ ಬಂಧನಕ್ಕೆ ಸಹಾಯವಾಗುವ ಮಾಹಿತಿಗಳನ್ನು ನೀಡಿದವರಿಗೆ ಒಟ್ಟು 82 ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.
ಶರಣಾಗತರಾದ ನಕ್ಸಲೀಯರ ಪೈಕಿ ನಾಲ್ವರು ಸಮವಸ್ತ್ರ ಧರಿಸಿ ಶಸ್ತ್ರಧಾರಿಗಳಾಗಿದ್ದರು.
ಮಾವೋವಾದಿ ವಿಭಾಗೀಯ ಸಮಿತಿ ಸದಸ್ಯರಾದ ರಮೇಶ್ ಯಾನೆ ಬಾಜು ಲೇಕಮಿ ಮತ್ತು ಭೀಮ ಯಾನೆ ಕಿರಣ್ ಹಿದ್ಮ ಕೊವಾಸಿ ಶರಣಾದವರಲ್ಲಿ ಸೇರಿದ್ದಾರೆ.
ಅವರ ಶರಣಾಗತಿಯು ಛತ್ತೀಸ್‌ಗಢ, ಮಹಾರಾಷ್ಟ್ರ ಮತ್ತು ತೆಲಂಗಾಣವನ್ನು ಆವರಿಸಿರುವ ದಂಡಕಾರಣ್ಯದ ಮಾವೋವಾದಿಗಳಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಅಕ್ಟೋಬರ್ 15ರಂದು ಮಾವೋವಾದಿ ಪಾಲಿಟ್‌ಬ್ಯೂರೋ ಸದಸ್ಯ ಭೂಪತಿ ಯಾನೆ ಮಲ್ಲೊಜುಲ ವೇಣುಗೋಪಾಲ್ ರಾವ್ ತನ್ನ 60 ಸಂಗಡಿಗರೊಂದಿಗೆ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಮ್ಮುಖದಲ್ಲಿ ಶರಣಾದ ಬಳಿಕ ಗಡ್ಚಿರೋಳಿ ಪೊಲೀಸರಿಗೆ ಸಿಕ್ಕಿದ ದೊಡ್ಡ ಯಶಸ್ಸು ಇದಾಗಿದೆ. ಈ ಶರಣಾಗತಿಯು ಗಡ್ಚಿರೋಳಿಯಲ್ಲಿ ಮಾವೋವಾದದ ಕೊನೆಯ ಆರಂಭವಾಗಿದೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಪೊಲೀಸ್ ಮುಖ್ಯಸ್ಥೆ ಶುಕ್ಲಾ ಹೇಳಿದರು.
‘‘ಮಾವೋವಾದವನ್ನು ಭಾರತದಿಂದ ನಿರ್ಮೂಲಗೊಳಿಸಲು ಕೇಂದ್ರ ಸರಕಾರ ವಿಧಿಸಿರುವ 2026 ಮಾರ್ಚ್ 31ರ ಗಡುವಿಗೆ ನಾವು ಬದ್ಧರಾಗಿದ್ದೇವೆ’’ ಎಂದು ಅವರು ಹೇಳಿದರು.
ಈ ವರ್ಷ ಗಡ್ಚಿರೋಳಿಯಲ್ಲಿ 100ಕ್ಕೂ ಅಧಿಕ ಮಾವೋವಾದಿಗಳು ಶರಣಾಗಿದ್ದಾರೆ ಎಂದು ಅವರು ಹೇಳಿದರು.