Maharashtra | ಜಲ್ನಾ ನಗರ ಪಾಲಿಕೆ ಚುನಾವಣೆ: ಗೌರಿ ಲಂಕೇಶ್ ಹತ್ಯೆ ಆರೋಪಿಗೆ ಗೆಲುವು
Photo Credit : indiatoday.in
ಜಾಲ್ನಾ(ಮಹಾರಾಷ್ಟ್ರ),ಜ.16: ಗುರುವಾರ ನಡೆದಿದ್ದ ರಾಜ್ಯದ ಮುನ್ಸಿಪಲ್ ಚುನಾವಣೆಗಳ ಫಲಿತಾಂಶಗಳು ಶುಕ್ರವಾರ ಪ್ರಕಟಗೊಂಡಿದ್ದು,2017ರಲ್ಲಿ ನಡೆದಿದ್ದ ಪತ್ರಕರ್ತೆ ಗೌರಿ ಲಂಕೇಶ್ ಕೊಲೆ ಪ್ರಕರಣದ ಆರೋಪಿ ಶ್ರೀಕಾಂತ್ ಪಾಂಗಾರಕರ್ ಜಾಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದಿರುವುದು ದೇಶದ ಗಮನವನ್ನು ಸೆಳೆದಿದೆ. ವಾರ್ಡ್ ನಂ.13ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಪಾಂಗಾರಕರ್ ಎದುರು ಬಿಜೆಪಿ ಅಭ್ಯರ್ಥಿ ರಾವಸಾಹೇಬ್ ಧೋಬ್ಲೆ 2,761 ಮತಗಳ ಅಂತರದಿಂದ ಸೋಲನುಭವಿಸಿದ್ದಾರೆ.
ಏಕನಾಥ ಶಿಂಧೆ ನೇತೃತ್ವದ ಶಿವಸೇನೆ ಈ ವಾರ್ಡ್‌ನಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿರಲಿಲ್ಲ. ಗೌರಿ ಲಂಕೇಶ್ ಕೊಲೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಪಾಂಗಾರಕರ್ ಗೆಲುವು ಸಾಧಿಸಿದ್ದಾರೆ.
ಹಿರಿಯ ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶರನ್ನು 2017, ಸೆ.5ರಂದು ಬೆಂಗಳೂರಿನ ಅವರ ಮನೆಯ ಸಮೀಪ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಹತ್ಯೆಯು ದೇಶಾದ್ಯಂತ ಆಕ್ರೋಶಕ್ಕೆ ಕಾರಣವಾಗಿತ್ತಲ್ಲದೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಭಿನ್ನಾಭಿಪ್ರಾಯ ಮತ್ತು ರಾಜಕೀಯ ಅಸಹಿಷ್ಣುತೆಯ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿತ್ತು.
ಪ್ರಕರಣದಲ್ಲಿ ಆರೋಪಿಯಾಗಿ ಪಾಂಗಾರಕರ್ ಹೆಸರನ್ನು ನಂತರ ಸೇರಿಸಲಾಗಿದ್ದು, 2024,ಸೆ.4ರಂದು ಕರ್ನಾಟಕ ಉಚ್ಚ ನ್ಯಾಯಾಲಯವು ಜಾಮೀನು ಮಂಜೂರು ಮಾಡಿತ್ತು.
2001 ಮತ್ತು 2006ರ ನಡುವೆ ಜಾಲ್ನಾ ಮಹಾನಗರ ಪಾಲಿಕೆಯಲ್ಲಿ ಅವಿಭಜಿತ ಶಿವಸೇನೆಯ ಕಾರ್ಪೊರೇಟರ್ ಆಗಿದ್ದ ಪಾಂಗಾರಕರ್‌ಗೆ 2011ರಲ್ಲಿ ಟಿಕೆಟ್ ನಿರಾಕರಿಸಿದ್ದು ಬಲಪಂಥಿಯ ಹಿಂದು ಜನಜಾಗ್ರತಿ ಸಮಿತಿಯನ್ನು ಸೇರಲು ಕಾರಣವಾಗಿತ್ತು.
2018ರ ಆಗಸ್ಟ್‌ನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಕಚ್ಚಾ ಬಾಂಬ್‌ಗಳು ಮತ್ತು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಬಳಿಕ ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ದಳವು ಸ್ಫೋಟಕಗಳ ಕಾಯ್ದೆ, ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ ಪಾಂಗಾರಕರ್‌ನನ್ನು ಬಂಧಿಸಿತ್ತು.
ಪಾಂಗಾರಕರ್ ನ.2024ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಮುನ್ನ ಏಕನಾಥ ಶಿಂಧೆ ನೇತೃತ್ವದ ಶಿವಸೇನೆಯನ್ನು ಸೇರಿದ್ದು, ವ್ಯಾಪಕ ಟೀಕೆಗಳ ಬಳಿಕ ಶಿಂಧೆ ಅದನ್ನು ತಡೆಹಿಡಿದಿದ್ದರು.