2024ರಲ್ಲಿ ದಿಲ್ಲಿಯಲ್ಲಿ ಉಸಿರಾಟಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ 9 ಸಾವಿರಕ್ಕೂ ಅಧಿಕ ಮಂದಿ ಮೃತ್ಯು: ಸರಕಾರದ ದತ್ತಾಂಶಗಳಿಂದ ಬಹಿರಂಗ
ಸಾಂದರ್ಭಿಕ ಚಿತ್ರ | Photo Credit ; PTI
ಹೊಸದಿಲ್ಲಿ,ಜ.16: ಉಸಿರಾಟಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಾಗಿ 2024ರಲ್ಲಿ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ 9,200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. 2023ರಲ್ಲಿ 8,800 ಮಂದಿ ಮೃತಪಟ್ಟಿದ್ದು, ಸಾವಿನ ಸಂಖ್ಯೆಯಲ್ಲಿ 400ರಷ್ಟು ಏರಿಕೆಯಾಗಿದೆ ಎಂದು ದಿಲ್ಲಿ ಸರಕಾರ ಬಿಡುಗಡೆಗೊಳಿಸಿದ ದತ್ತಾಂಶಗಳಿಂದ ತಿಳಿದು ಬಂದಿದೆ.
ಅಸ್ತಮಾ, ನ್ಯೂಮೋನಿಯಾ, ಶ್ವಾಸಕೋಶದ ಕ್ಯಾನ್ಸರ್ ಹಾಗೂ ಟ್ಯೂಬರೋಕ್ಯೂಲೊಸಿಸ್ ದಿಲ್ಲಿಯಲ್ಲಿ ಸಾಮಾನ್ಯವಾಗಿರುವ ಶ್ವಾಸಕೋಶದ ಕಾಯಿಲೆಗಳಾಗಿವೆ. ದಿಲ್ಲಿಯಲ್ಲಿ ಶ್ವಾಸಕೋಶದ ತೊಂದರೆಗಳಿಂದ ಮೃತಪಟ್ಟವರ ಸಂಖ್ಯೆಯಲ್ಲಿಯೂ ಏರಿಕೆಯಾಗಿರುವುದು ದತ್ತಾಂಶಗಳು ತೋರಿಸಿಕೊಟ್ಟಿವೆ.
ದಿಲ್ಲಿಯಲ್ಲಿ 2023ರಲ್ಲಿ 1.32 ಲಕ್ಷ ಮಂದಿ ಮೃತಪಟ್ಟಿದ್ದು, ಇದಕ್ಕೆ ಹೋಲಿಸಿದರೆ 2024ರಲ್ಲಿ 1.39 ಲಕ್ಷ ಮಂದಿ ಮೃತಪಟ್ಟಿದ್ದಾರೆ. 2024ರಲ್ಲಿ ದಿಲ್ಲಿಯಲ್ಲಿ 3.0 ಲಕ್ಷ ಶಿಶುಗಳು ಜನಿಸಿದ್ದು, ಇದು ಅದರ ಹಿಂದಿನ ವರ್ಷಕ್ಕಿಂತ 8,628ರಷ್ಟು ಕಡಿಮೆಯಾಗಿದೆ.
ಹೃದಯ ನಾಳದ ರೋಗ, ಪಾರ್ಶ್ವವಾಯು, ಅಧಿಕ ರಕ್ತದೊತ್ತಡ ಹಾಗೂ ಹೃದಯಾಘಾತ 2024ರಲ್ಲಿ ದಿಲ್ಲಿಯಲ್ಲಿ ಸಂಭವಿಸಿದ ಬಹುತೇಕ ಸಾವುಗಳಿಗೆ ಮುಖ್ಯ ಕಾರಣಗಳಾಗಿದ್ದವು. ಇಂತಹ ರೋಗಗಳಿಂದಾಗಿ 2024ರಲ್ಲಿ 21,200 ಮಂದಿ ಮೃತಪಟ್ಟಿದ್ದರು.
2023ರಲ್ಲಿ ಹೃದಯನಾಳದ ರೋಗಗಳಿಂದಾಗಿ 15,700 ಮಂದಿ ಮೃತಪಟ್ಟಿದ್ದಾರೆಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.
ಬ್ಯಾಕ್ಟೀರಿಯಾ ಹಾಗೂ ವೈರಸ್‌ಗಳ ಹರಡುವಿಕೆಯಿಂದಾಗಿ ಉಂಟಾಗುವ ಸೋಂಕು ಹಾಗೂ ಪರಾವಲಂಭಿ ರೋಗಗಳು ದಿಲ್ಲಿಯಲ್ಲಿ 2024ರಲ್ಲಿ ಸಂಭವಿಸಿದ ಪ್ರಾಣಹಾನಿಗೆ ಎರಡನೇ ಅತಿ ಮುಖ್ಯ ಕಾರಣಗಳಾಗಿವೆ. ಇಂತಹ ರೋಗಗಳಿಂದಾಗಿ ಇದೇ ಅವಧಿಯಲ್ಲಿ 16 ಸಾವಿರ ಮಂದಿ ಮೃತಪಟ್ಟಿದ್ದಾರೆ. 2023ರಲ್ಲಿ 20,781 ಸಾವುಗಳು ಸಂಭವಿಸಿದ್ದವು.
ರಾಷ್ಟ್ರ ರಾಜಧಾನಿ ಹೊಸದಿಲ್ಲಿಯಲ್ಲಿ ಶಿಶು ಮರಣ ಪ್ರಮಾಣ ಇಳಿಕೆಯಲ್ಲಿ ಗಣನೀಯ ಸುಧಾರಣೆ ಕಂಡುಬಂದಿದೆ. 2024ರಲ್ಲಿ ಪ್ರತಿ ಸಾವಿರ ಜನನಗಳಿಗೆ ಶೇ.22.4 ಶಿಶುಗಳು ಮೃತಪಟ್ಟಿದ್ದರೆ, 2023ರಲ್ಲಿ ಶೇ. 23.6 ಆಗಿತ್ತು.