ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ಕಾರಣಕ್ಕೆ ವಲಸೆ ಕಾರ್ಮಿಕರಿಗೆ ಕಿರುಕುಳ: ಮಮತಾ ಬ್ಯಾನರ್ಜಿ ಆರೋಪ
ಮಮತಾ ಬ್ಯಾನರ್ಜಿ | Photo Credit : PTI
ಕೋಲ್ಕತಾ, ಜ. 16: ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ಕಾರಣಕ್ಕೆ ವಲಸೆ ಕಾರ್ಮಿಕರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಆರೋಪಿಸಿದ್ದಾರೆ.
ಆಡಳಿತಾತ್ಮಕ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ತರ ಬಂಗಾಳಕ್ಕೆ ತೆರಳಿದ ಸಂದರ್ಭ ಮಾತನಾಡಿದ ಮಮತಾ ಬ್ಯಾನರ್ಜಿ, 2026ರ ವಿಧಾನ ಸಭೆ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ಮನದಟ್ಟಾಗಿದೆ. ಆದುದರಿಂದ ಅದು ರಾಜ್ಯದಲ್ಲಿ ಗಲಭೆ ಪ್ರಚೋದಿಸಲು ಯೋಜಿಸುತ್ತಿದೆ ಎಂದಿದ್ದಾರೆ.
ಪಶ್ಚಿಮಬಂಗಾಳದ ಹೊರಗೆ ವಲಸೆ ಕಾರ್ಮಿಕರ ಮೇಲಿನ ದಾಳಿಯ ಕುರಿತಂತೆ ಮುರ್ಶಿದಾಬಾದ್‌ನ ಬೆಲಡಾಂಗಾದಲ್ಲಿ ನಡೆದ ಪ್ರತಿಭಟನೆ ಉಲ್ಲೇಖಿಸಿದ ಮಮತಾ ಬ್ಯಾನರ್ಜಿ, ಅಲ್ಪ ಸಂಖ್ಯಾತ ಸಮುದಾಯದ ಆಕ್ರೋಶ ನ್ಯಾಯಬದ್ಧವಾಗಿತ್ತು. ವಲಸೆ ಕಾರ್ಮಿಕರ ಮೇಲೆ ಪದೇ ಪದೇ ದಾಳಿ ಘಟನೆಗಳು ಈ ಪ್ರತಿಭಟನೆಗೆ ಕಾರಣ ಎಂದಿದ್ದಾರೆ.
‘‘ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮಾತ್ರ ಪಶ್ಚಿಮ ಬಂಗಾಳದ ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆಯುತ್ತಿದೆ. ನಾವು ಅವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುತ್ತೇವೆ’’ ಎಂದು ಅವರು ಪ್ರತಿಪಾದಿಸಿದ್ದಾರೆ.
ಪಶ್ಚಿಮಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್)ಯಲ್ಲಿ ಬದಲಾವಣೆ ಮಾಡಿರುವುದಕ್ಕೆ ಚುನಾವಣಾ ಆಯೋಗವನ್ನು ತರಾಟೆಗೆ ತೆಗೆದುಕೊಂಡ ಮಮತಾ ಬ್ಯಾನರ್ಜಿ, ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದ ಆತಂಕದಿಂದ ಸುಮಾರು 100 ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.
‘‘ನಿಮ್ಮ ಸ್ಥಾನದ ಗೌರವ, ಪಾರದರ್ಶಕತೆಯನ್ನು ಕಾಪಾಡಿ, ಆ ಬಳಿಕ ಮಾತ್ರವೇ ಜನರು ನಿಮಗೆ ಗೌರವ ನೀಡುತ್ತಾರೆ’’ ಎಂದು ಮಮತಾ ಬ್ಯಾನರ್ಜಿ ಮುಖ್ಯ ಚುನಾವಣಾ ಆಯುಕ್ತರಿಗೆ ಕಿವಿಮಾತು ಹೇಳಿದ್ದಾರೆ.