ಎಸ್ಐಆರ್ | ಬಿಜೆಪಿ ಅಲ್ಪ ಅಂತರದಿಂದ ಗೆದ್ದಿರುವ ಕ್ಷೇತ್ರದಲ್ಲಿ ಮುಸ್ಲಿಮ್ ಮತಗಳನ್ನು ಅಳಿಸಲು ಒತ್ತಡ: ರಾಜಸ್ಥಾನ BLO ಆರೋಪ
“ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ” ಎಂದ ಬಿಎಲ್ಒ
ಸಾಂದರ್ಭಿಕ ಚಿತ್ರ | Photo Credit ; PTI
ಜೈಪುರ: ರಾಜಸ್ಥಾನದಲ್ಲಿ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯ (ಎಸ್ಐಆರ್) ಬಳಿಕ ಪ್ರಕಟಿಸಲಾಗಿರುವ ಕರಡು ಮತದಾರರ ಪಟ್ಟಿಗಳಿಂದ ತನ್ನ ಮತಗಟ್ಟೆಯ 470 ಮತದಾರರ (ಸುಮಾರು ಶೇ.40) ಹೆಸರುಗಳನ್ನು ಅಳಿಸುವಂತೆ ಬಿಜೆಪಿ ಸಲ್ಲಿಸಿರುವ ಆಕ್ಷೇಪಣೆಗಳನ್ನು ಪರಿಶೀಲಿಸುವಂತೆ ತನಗೆ ಬೆದರಿಕೆಯೊಡ್ಡಲಾಗುತ್ತಿದೆ ಮತ್ತು ತನ್ನ ಸಾಮರ್ಥ್ಯವನ್ನು ಮೀರಿ ಒತ್ತಡವನ್ನು ಹೇರಲಾಗುತ್ತಿದೆ ಎಂದು ಜೈಪುರದ ಹವಾ ಮಹಲ್ ವಿಧಾನಸಭಾ ಕ್ಷೇತ್ರದ ಬೂತ್ ಮಟ್ಟದ ಅಧಿಕಾರಿ (ಬಿಎಲ್ಒ) ಕೀರ್ತಿಕುಮಾರ್ ಆರೋಪಿಸಿದ್ದಾರೆ. ಈ ಆಕ್ಷೇಪಗಳು ಮುಸ್ಲಿಮ್ ಮತದಾರರನ್ನು ಗುರಿಯಾಗಿಸಿಕೊಂಡಿವೆ ಮತ್ತು ತಾನು ಈಗಾಗಲೇ ಈ ಎಲ್ಲ ಮತದಾರರನ್ನು ಪರಿಶೀಲಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ ಎಂದು newslaundry.com ವರದಿ ಮಾಡಿದೆ.
‘ನಾನು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಅಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಕುಮಾರ್ ದೂರವಾಣಿ ಕರೆಯಲ್ಲಿ ಕೂಗಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗಮನಾರ್ಹವಾಗಿ, ಹವಾ ಮಹಲ್ ಮುಸ್ಲಿಮ್ ಬಹುಸಂಖ್ಯಾತ ಕ್ಷೇತ್ರವಾಗಿದ್ದು,ಸ್ಥಳೀಯವಾಗಿ ‘ಮಹಾರಾಜ’ ಎಂದು ಕರೆಯಲ್ಪಡುತ್ತಿರುವ ಬಿಜೆಪಿ ಶಾಸಕ ಬಾಲಮುಕುಂದ ಆಚಾರ್ಯ ಅವರು 2023ರ ವಿಧಾನಸಭಾ ಚುನಾವಣೆಯಲ್ಲಿ ಇಲ್ಲಿಂದ ಕೇವಲ 974 ಮತಗಳ ಅಂತರದಿಂದ ಗೆದ್ದಿದ್ದರು. ಜೈಪುರದ ದಕ್ಷಿಣಮುಖಿಜಿ ಬಾಲಾಜಿ ದೇವಸ್ಥಾನದ ಮುಖ್ಯ ಅರ್ಚಕರಾಗಿರುವ ಆಚಾರ್ಯ ಮುಸ್ಲಿಮರ ವಿರುದ್ಧ ತನ್ನ ಹೇಳಿಕೆಗಳಿಂದ ಪದೇ ಪದೇ ವಿವಾದಕ್ಕೆ ಗುರಿಯಾಗಿದ್ದಾರೆ.
ಶಾಸಕ ಬಾಲಮುಕುಂದ್ ಆಚಾರ್ಯ ಅವರ ಜಯವನ್ನು ಖಚಿತಪಡಿಸಿಕೊಳ್ಳಲು ಕರಡು ಮತದಾರರ ಪಟ್ಟಿಗಳಿಂದ ಮತದಾರರ ಹೆಸರುಗಳನ್ನು ಅಳಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಕುಮಾರ್ ಆರೋಪಿಸಿದ್ದಾರೆ. "ಇಡೀ ಬಸ್ತಿಯ ಮತದಾರರನ್ನೇ ತೆಗೆದುಹಾಕಿಬಿಡುತ್ತೇನೆ, ಆಗ ಮಹಾರಾಜರು ಸುಲಭವಾಗಿ ಗೆಲ್ಲಬಹುದು" ಎಂದು ಕುಮಾರ್ ಹತಾಶೆಯಿಂದ ಹೇಳಿದ್ದಾರೆ. ಹವಾ ಮಹಲ್ನ ಇತರ ಹಿಂದೂ ಬಹುಸಂಖ್ಯಾತ ಬೂತ್ಗಳಲ್ಲಿ ಇಂತಹ ಯಾವುದೇ ಸಾರಾಸಗಟು ಆಕ್ಷೇಪಣೆಗಳು ದಾಖಲಾಗಿಲ್ಲ ಎಂದು ವರದಿಯಾಗಿದೆ.
ಚುನಾವಣಾ ಆಯೋಗದ (EC) 2023ರ ಕೈಪಿಡಿಯ ಪ್ರಕಾರ, ಒಬ್ಬ ಬೂತ್ ಮಟ್ಟದ ಏಜೆಂಟ್ ಒಂದು ದಿನಕ್ಕೆ 10ಕ್ಕಿಂತ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸುವಂತಿಲ್ಲ. ಆದರೆ, ಇಲ್ಲಿ ಬಿಜೆಪಿ ಏಜೆಂಟ್ಗಳು ಕೇವಲ ಎರಡು ದಿನಗಳಲ್ಲಿ 400ಕ್ಕೂ ಹೆಚ್ಚು ಆಕ್ಷೇಪಣೆಗಳನ್ನು ಸಲ್ಲಿಸುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಅರ್ಜಿಗಳನ್ನು ಕೇವಲ ಎರಡು ದಿನಗಳಲ್ಲಿ ಪರಿಶೀಲಿಸಿ ಡಿಜಿಟಲೀಕರಣ ಮಾಡುವುದು ಅಸಾಧ್ಯವೆಂದು BLOಗಳು ಅಲವತ್ತುಕೊಂಡಿದ್ದಾರೆ.
ರಾಜಸ್ಥಾನದಲ್ಲಿ ಇತ್ತೀಚಿಗೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸಮಯದಲ್ಲಿ ಕೆಲಸದ ಒತ್ತಡ ಮತ್ತು ರಾಜಕೀಯ ಬೆದರಿಕೆಗಳಿಂದಾಗಿ ಮೂವರು BLOಗಳು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಹವಾ ಮಹಲ್ ಕ್ಷೇತ್ರದ ಬಿಜೆಪಿ ಶಾಸಕ ಬಾಲಮುಕುಂದ್ ಆಚಾರ್ಯ ಅವರು ಈ ಹಿಂದೆಯೂ ಮುಸ್ಲಿಂ ಸಮುದಾಯದ ವಿರುದ್ಧ ನೀಡಿದ ಹೇಳಿಕೆಗಳಿಂದ ವಿವಾದಕ್ಕೀಡಾಗಿದ್ದರು. ಈಗ ಅವರ ಕ್ಷೇತ್ರದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಗಳು ಕೇವಲ ಕಾಕತಾಳೀಯವಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.