ವಿತ್ತವರ್ಷ 25ರಲ್ಲಿ ದೇಶಕ್ಕೆ ಹರಿದುಬಂದ ಒಟ್ಟು ವಿದೇಶಿ ನೇರ ಹೂಡಿಕೆಯ ಪೈಕಿ ಶೇ.51ರಷ್ಟು ಮಹಾರಾಷ್ಟ್ರ, ಕರ್ನಾಟಕಕ್ಕೆ
ಹೊಸದಿಲ್ಲಿ: ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ(ಡಿಪಿಐಐಟಿ)ಯ ಇತ್ತೀಚಿನ ದತ್ತಾಂಶಗಳ ಪ್ರಕಾರ ಹಿಂದಿನ ವಿತ್ತವರ್ಷ 2024-25ರಲ್ಲಿ ದೇಶದಲ್ಲಿ ವಿದೇಶಿ ನೇರ ಹೂಡಿಕೆ(ಎಫ್ಡಿಐ)ಯ ಶೇ.51ರಷ್ಟು ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಹರಿದುಬಂದಿದೆ.
2024-25ನೇ ಸಾಲಿನ ಎಪ್ರಿಲ್ ನಿಂದ ಮಾರ್ಚ್ ನಡುವಿನ ಅವಧಿಯಲ್ಲಿ ಮಹಾರಾಷ್ಟ್ರವು ಗರಿಷ್ಠ 19.6 ಶತಕೋಟಿ.ಡಾಲರ್ ಗಳ(ದೇಶದ ಒಟ್ಟು ಎಫ್ಡಿಐನ ಶೇ.31) ಎಫ್ಡಿಐಗಳನ್ನು ಆಕರ್ಷಿಸಿದ್ದರೆ ಕರ್ನಾಟಕವು ಎಫ್ಡಿಐ ರೂಪದಲ್ಲಿ 6.62 ಶತಕೋಟಿ ಡಾಲರ್ ಗಳ ಪಾಲನ್ನು ಪಡೆದಿದೆ. ದಿಲ್ಲಿ(6 ಶತಕೋಟಿ ಡಾಲರ್),ಗುಜರಾತ್(5.71 ಶತಕೋಟಿ ಡಾಲರ್), ತಮಿಳುನಾಡು(3.68 ಶತಕೋಟಿ ಡಾಲರ್),ಹರ್ಯಾಣ(3.14 ಶತಕೋಟಿ ಡಾ.) ಮತ್ತು ತೆಲಂಗಾಣ(3 ಶತಕೋಟಿ ಡಾ.) ನಂತರದ ಸ್ಥಾನಗಳಲ್ಲಿವೆ.
ತಜ್ಞರ ಪ್ರಕಾರ ಮಹಾರಾಷ್ಟ್ರ ಮತ್ತು ಕರ್ನಾಟಕಕ್ಕೆ ಗರಿಷ್ಠ ಎಫ್ಡಿಐ ಒಳಹರಿವಿಗೆ ಮುಖ್ಯ ಕಾರಣ ಮೂಲಸೌಕರ್ಯದಲ್ಲಿಯ ಗಣನೀಯ ಸುಧಾರಣೆಯಾಗಿದೆ.
ಕಳೆದ ವಿತ್ತವರ್ಷದಲ್ಲಿ ಪಾಲು ಬಂಡವಾಳ ಒಳಹರಿವು,ಗಳಿಕೆಯ ಮರುಹೂಡಿಕೆ ಮತ್ತು ಇತರ ಬಂಡವಾಳವನ್ನು ಒಳಗೊಂಡ ಒಟ್ಟು ಎಫ್ಡಿಐ ಶೇ.14ರಷ್ಟು ಹೆಚ್ಚಳಗೊಂಡು 81.04 ಶತಕೋಟಿ ಡಾ.ಗೆ ತಲುಪಿದ್ದು, ಇದು ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ಹೆಚ್ಚಿನ ಮೊತ್ತವಾಗಿದೆ. 2023-24ರಲ್ಲಿ ಇದು 71.3 ಶತಕೋಟಿ ಡಾ.ಗಳಷ್ಟಿತ್ತು.