"ಶಿವಾಜಿ ಪ್ರತಿಮೆಯಲ್ಲೂ ಭ್ರಷ್ಟಾಚಾರ": ಪ್ರತಿಮೆ ಕುಸಿತಕ್ಕೆ ಮಹಾರಾಷ್ಟ್ರದ ಪ್ರತಿಪಕ್ಷಗಳ ಟೀಕೆ
PC : X \ @INCMaharashtra
ಮುಂಬೈ: ಮಹಾರಾಷ್ಟ್ರದ ಸಿಂಧುದುರ್ಗ ಜಿಲ್ಲೆಯಲ್ಲಿ 17ನೇ ಶತಮಾನದ ದೊರೆ ಶಿವಾಜಿಯ ಪ್ರತಿಮೆ ಕುಸಿದು ಬಿದ್ದಿರುವುದಕ್ಕೆ ರಾಜ್ಯ ಸರ್ಕಾರವೇ ಹೊಣೆ ಎಂದು ಮಹಾರಾಷ್ಟ್ರದ ವಿರೋಧ ಪಕ್ಷ ಹೇಳಿದೆ.
ಮಾಲ್ವಾನ್ ಪ್ರದೇಶದ ರಾಜ್‌ಕೋಟ್ ಕೋಟೆಯಲ್ಲಿರುವ 35 ಅಡಿ ಎತ್ತರದ ಪ್ರತಿಮೆ ಸೋಮವಾರ ಮಧ್ಯಾಹ್ನ ಭಾರೀ ಮಳೆ ಮತ್ತು ಗಾಳಿಯ ಹೊಡೆತಕ್ಕೆ ಕುಸಿದಿದೆ. ಇದನ್ನು ಡಿಸೆಂಬರ್‌ನಲ್ಲಿ ನೌಕಾಪಡೆಯ ದಿನದಂದು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಶರದ್ಚಂದ್ರ ಪವಾರ್) ನಾಯಕಿ ಸುಪ್ರಿಯಾ ಸುಳೆ, ಪ್ರತಿಮೆಯ ಕುಸಿತವು ಶಿವಾಜಿಗೆ ಅವಮಾನವಾಗಿದೆ ಎಂದು ಹೇಳಿದ್ದಾರೆ.
"ಈ ಪ್ರತಿಮೆಯ ಕೆಲಸವು ಕಳಪೆ ಗುಣಮಟ್ಟದ್ದಾಗಿದೆ ಎಂಬುದು ಸ್ಪಷ್ಟವಾಗಿದೆ. ಅದೇ ಕಾರಣಕ್ಕೆ ಉದ್ಘಾಟನೆಗೊಂಡ ಒಂದು ವರ್ಷ ಪೂರ್ಣಗೊಳ್ಳುವ ಮೊದಲೇ ಪ್ರತಿಮೆ ಕುಸಿದಿದೆ. ಭ್ರಷ್ಟಾಚಾರಕ್ಕೆ ಇದು ಬಹಿರಂಗ ಉದಾಹರಣೆ. ಪ್ರತಿಮೆಯ ಕಳಪೆ ಗುಣಮಟ್ಟದ ಬಗ್ಗೆ ಪರಿಶೀಲಿಸಲು ಸಮಗ್ರ ತನಿಖೆಯ ಅಗತ್ಯವಿದೆ" ಎಂದು ಅವರು ಒತ್ತಾಯಿಸಿದ್ದಾರೆ.
ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಶರದ್ಚಂದ್ರ ಪವಾರ್) ಮಹಾರಾಷ್ಟ್ರ ಮುಖ್ಯಸ್ಥ ಜಯಂತ್ ಪಾಟೀಲ್, ಈ ಘಟನೆಗೆ ರಾಜ್ಯದ ಮಹಾಯುತಿ ಸರ್ಕಾರವೇ ಹೊಣೆಯಾಗಿದೆ ಎಂದು ಹೇಳಿದರು.
ಘಟನೆಯ ಬಗ್ಗೆ ನೌಕಾಪಡೆ ತೀವ್ರ ಕಳವಳ ವ್ಯಕ್ತಪಡಿಸಿದೆ ಎಂದು ಎಎನ್‌ಐ ವರದಿ ಮಾಡಿದೆ. "ಭಾರತೀಯ ನೌಕಾಪಡೆಯು ಸಿಂಧುದುರ್ಗದ ನಾಗರಿಕರಿಗೆ ಸಮರ್ಪಣೆಯಾಗಿ ಡಿಸೆಂಬರ್ 4, 2023 ರಂದು ನೌಕಾಪಡೆಯ ದಿನದಂದು ಅನಾವರಣಗೊಂಡ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆಗೆ ಉಂಟಾದ ಹಾನಿಗೆ ತೀವ್ರ ಕಳವಳ ವ್ಯಕ್ತಪಡಿಸುತ್ತದೆ" ಎಂದು ನೌಕಾಪಡೆ ಹೇಳಿದೆ.
"ಈ ಬಗ್ಗೆ ತಕ್ಷಣವೇ ತನಿಖೆ ಮಾಡಲು ಮತ್ತು ಪ್ರತಿಮೆಯನ್ನು ಸರಿಪಡಿಸಿ, ಪುನಃ ಸ್ಥಾಪಿಸಲು ಕ್ರಮಗಳನ್ನು ಕೈಗೊಳ್ಳಲು ತಂಡವನ್ನು ನಿಯೋಜಿಸಲಾಗಿದೆ" ಎಂದು ನೌಕಾಪಡೆ ಹೇಳಿದೆ.