×
Ad

ಕೊಳಕು ಪ್ರಶ್ನೆಗಳನ್ನು ಕೇಳುತ್ತಿದ್ದಾರೆಂದು ಆರೋಪಿಸಿ ನೈತಿಕತೆ ಸಮಿತಿಯ ಸಭೆಯಿಂದ ಹೊರನಡೆದ ಮಹುವಾ ಮೊಯಿತ್ರಾ

Update: 2023-11-02 17:41 IST

Screengrab: X/@ANI

ಹೊಸದಿಲ್ಲಿ: ಪ್ರಶ್ನೆಗಾಗಿ ನಗದು ಹಗರಣದಲ್ಲಿ ಇಂದು ಲೋಕಸಭೆಯ ನೈತಿಕತೆ ಸಮಿತಿ ಮುಂದೆ ಹಾಜರಾದ ತೃಣಮೂಲ ಕಾಂಗ್ರೆಸ್‌ ಪಕ್ಷದ ಸಂಸದೆ ಮಹುವಾ ಮೊಯಿತ್ರಾ ತಮಗೆ ಕೊಳಕು ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ಆರೋಪಿಸಿ ಸಭೆಯಿಂದ ಹೊರನಡೆದಿದ್ದಾರೆ. ಅವರೊಂದಿಗೆ ಸಮಿತಿಯ ವಿಪಕ್ಷ ಸದಸ್ಯರೂ ಹೊರನಡೆದಿದ್ದಾರೆ. ಕೊಳಕು ಪ್ರಶ್ನೆಗಳನ್ನು ಕೇಳಿದ್ದರಿಂದ ತಾವು ಸಹಕರಿಸಿಲ್ಲ, ಇನ್ನಷ್ಟು ಇಂತಹ ಪ್ರಶ್ನೆಗಳಿಗೆ ಉತ್ತರಿಸುವುದನ್ನು ತಪ್ಪಿಸಲು ಹೊರನಡೆದಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

ಇನ್ನೊಂದೆಡೆ ನೈತಿಕತೆ ಸಮಿತಿ ಅಧ್ಯಕ್ಷ ವಿನೋದ್‌ ಸೋಂಕರ್‌ ಪ್ರತಿಕ್ರಿಯಿಸಿ, ವಿಚಾರಣೆ ವೇಳೆ ಮಹುವಾ ಅವರು ಸಹಕರಿಸಿಲ್ಲ ಹಾಗೂ ಉತ್ತರಗಳನ್ನು ನೀಡುವುದನ್ನು ತಪ್ಪಿಸಲು ಹೊರನಡೆದಿದ್ದಾರೆ ಎಂದು ಆರೋಪಿಸಿದ್ದಾರೆ. ಆಕೆ ಸಮಿತಿಯ ಕಾರ್ಯನಿರ್ವಹಣೆ ಹಾಗೂ ತಮ್ಮ ಬಗ್ಗೆ ಆಕ್ಷೇಪಾರ್ಹ ಪದಗಳನ್ನು ಬಳಸಿದರೆಂದೂ ಸೋಂಕರ್‌ ಆರೋಪಿಸಿದ್ದಾರೆ.

ದರ್ಶನ್‌ ಹಿರಾನಂದಾನಿ ಅವರ ಅಫಿಡವಿಟ್‌ ಬಗ್ಗೆ ಹೇಳಿದಾಗ ಮಹುವಾ ಅವರು ಸಿಟ್ಟಿನಿಂದ ವರ್ತಿಸಿದರು ಎಂದು ಸಮಿತಿಯ ಇನ್ನೋರ್ವ ಸದಸ್ಯೆ ಅಪರಾಜಿತಾ ಸಾರಂಗಿ ಹೇಳಿದ್ದಾರೆ.

ಮಹುವಾ ಸಭೆಯಿಂದ ಹೊರನಡೆದಾಗ ಆಕ್ರೋಶಭರಿತರಾಗಿ “ಯಾವ ರೀತಿಯ ಸಭೆಯಿದು?. ಎಲ್ಲಾ ರೀತಿಯ ಕೊಳಕು ಪ್ರಶ್ನೆಗಳನ್ನು ಅವರು ಕೇಳುತ್ತಿದ್ದಾರೆ,” ಎಂದು ಹೇಳಿದರು. “ಅಸಂಬದ್ಧ ಮಾತನಾಡುತ್ತಿದ್ದಾರೆ, ನಿಮ್ಮ ಕಣ್ಣಲ್ಲಿ ನೀರು ಇದೆ ಎಂದರು ನನ್ನ ಕಣ್ಣಲ್ಲಿ ನೀರು ಇದೆಯೇ, ಕಾಣಿಸುತ್ತಿದೆಯೇ?” ಎಂದು ಮಹುವಾ ಪ್ರಶ್ನಿಸಿದರು.

“ಕೆಟ್ಟು ಹೋದ ವೈಯಕ್ತಿಕ ಸಂಬಂಧವು ತಮ್ಮ ವಿರುದ್ಧ ಈ ಆರೋಪಕ್ಕೆ ಕಾರಣ,” ಎಂದು ಸಮಿತಿ ಮುಂದೆ ಮೊಯಿತ್ರಾ ಹೇಳಿದ್ದರು. ಅಷ್ಟೇ ಅಲ್ಲದೆ ದೂರು ನೀಡಿದ್ದ ಸುಪ್ರೀಂ ಕೋರ್ಟ್‌ ವಕೀಲ ಜೈ ಅನಂತ್‌ ದೆಹದ್ರಾಯಿ ತಮ್ಮ “ಭಗ್ನ ಮಾಜಿ” ಎಂದೂ ಹೇಳಿದ್ದರು.

ದರ್ಶನ್‌ ಹಿರಾನಂದಾನಿ ಜೊತೆಗಿನ ಸಂಬಂಧದ ಬಗ್ಗೆಯೂ ಕೇಳಲಾಗಿತ್ತು ಎನ್ನಲಾಗಿದ್ದು, ಪ್ರಶ್ನೆ ಕೇಳಲು ನಗದು ಪಡೆದಿರುವ ಆರೋಪವನ್ನು ಮಹುವಾ ನಿರಾಕರಿಸಿದ್ದರಾದರೂ ತಮ್ಮ ಪಾರ್ಲಿಮೆಂಟ್‌ ಲಾಗಿನ್‌ ಐಡಿಯನ್ನು ಅವರೊಂದಿಗೆ ಹಂಚಿಕೊಂಡಿದ್ದನ್ನು ಮಹುವಾ ಈಗಾಗಲೇ ಒಪ್ಪಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News