ಯುವ ರಾಜಕೀಯ ನಾಯಕನಿಂದ ಅಶ್ಲೀಲ ಸಂದೇಶ: ಮಲಯಾಳಂ ನಟಿ ರಿನಿ ಆರೋಪ
ರಿನಿ ಜಾರ್ಜ್ (Photo:instagram/@rinianngeorge)
ಕೊಚ್ಚಿ: ಕೇರಳದ ಮುಂಚೂಣಿ ರಾಜಕೀಯ ಪಕ್ಷವೊಂದರ ಯುವ ನಾಯಕನೊಬ್ಬ ಅಶ್ಲೀಲ ಸಂದೇಶಗಳನ್ನು ರವಾನಿಸಿದ್ದು, ನನ್ನೊಂದಿಗೆ ದುರ್ವರ್ತನೆ ತೋರಿದ್ದಾರೆ ಎಂದು ಮಲಯಾಳಂನ ನಟಿ ರಿನಿ ಆನ್ ಜಾರ್ಜ್ ಆರೋಪಿಸಿದ್ದಾರೆ.
“ನನ್ನ ಈ ಹೇಳಿಕೆಯ ಬೆನ್ನಲ್ಲೇ ನನ್ನ ವಿರುದ್ಧ ಆನ್ ಲೈನ್ ದಾಳಿ ನಡೆಯುತ್ತಿದ್ದು, ಈ ಬೆದರಿಕೆ ಹೀಗೆಯೇ ಮುಂದುವರಿದಲ್ಲಿ ನಾನು ನಾಯಕನ ಹೆಸರು ಬಹಿರಂಗಪಡಿಸುತ್ತೇನೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ರಿನಿ, “ಯುವ ನಾಯಕನು ಆಕ್ಷೇಪಾರ್ಹ ಸಂದೇಶಗಳನ್ನು ರವಾನಿಸಿರುವುದಷ್ಟೇ ಅಲ್ಲದೆ, ನನ್ನನ್ನು ಹೋಟೆಲ್ ಗೆ ಆಹ್ವಾನಿಸಿದ್ದನು” ಎಂದು ದೂರಿದ್ದರು.
ಇತ್ತೀಚೆಗೆ ಆನ್ ಲೈನ್ ಸಂದರ್ಶನ ನೀಡಿದ್ದ ರಿನಿ, ಈ ಕುರಿತು ಮೊದಲ ಬಾರಿ ಆರೋಪ ಮಾಡಿದ್ದರು. “ಯುವ ನಾಯಕನಿಗೆ ಎಚ್ಚರಿಕೆ ನೀಡಿದರೂ, ಪಕ್ಷದ ಹಿರಿಯ ನಾಯಕರಿಗೆ ದೂರು ನೀಡಿದ್ದರೂ ಆತನ ಅನುಚಿತ ವರ್ತನೆ ಮುಂದುವರಿದಿದೆ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆದರೆ, ನಾಯಕನ ಹೆಸರನ್ನು ಬಹಿರಂಗಪಡಿಸಲು ನಿರಾಕರಿಸಿರುವ ರಿನಿ, “ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೇ ಬೇಡವೇ ಎಂಬ ಕುರಿತು ಇನ್ನೂ ನಿರ್ಧರಿಸಿಲ್ಲ” ಎಂದು ಹೇಳಿದ್ದಾರೆ.