ಉಪರಾಷ್ಟ್ರಪತಿ ಚುನಾವಣೆ | ಅಡ್ಡ ಮತದಾನದ ಬಗ್ಗೆ ತನಿಖೆ ನಡೆಯಬೇಕು: ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಆಗ್ರಹ
ಮನೀಶ್ ತಿವಾರಿ |PC : PTI
ಹೊಸದಿಲ್ಲಿ: ಉಪರಾಷ್ಟ್ರಪತಿ ಚುನಾವಣೆಯಲ್ಲಿ ಅಡ್ಡ ಮತದಾನ ನಡೆದಿದೆ ಎಂಬ ಆರೋಪಗಳು ಕೇಳಿ ಬಂದಿರುವ ಬೆನ್ನಿಗೇ, “ಇದು ಗಂಭೀರ ಸಂಗತಿಯಾಗಿದ್ದು, ಈ ಕುರಿತು ತನಿಖೆ ನಡೆಯಬೇಕಾದ ಅಗತ್ಯವಿದೆ” ಎಂದು ಕಾಂಗ್ರೆಸ್ ನಾಯಕ ಮನೀಶ್ ತಿವಾರಿ ಆಗ್ರಹಿಸಿದ್ದಾರೆ.
“ಒಂದು ವೇಳೆ ಅಡ್ಡ ಮತದಾನವೇನಾದರೂ ನಡೆದಿದ್ದರೆ, ಅದನ್ನು ಇಂಡಿಯಾ ಮೈತ್ರಿಕೂಟದ ಪ್ರತಿಯೊಂದು ಅಂಗಪಕ್ಷವೂ ಗಂಭೀರವಾಗಿ ತನಿಖೆಗೊಳಪಡಿಸಬೇಕು. ಅಡ್ಡ ಮತದಾನ ಗಂಭೀರ ಸಂಗತಿಯಾಗಿದೆ” ಎಂದು ಅವರು ಹೇಳಿದ್ದಾರೆ.
“ಏನೆಲ್ಲ ಹೇಳಲಾಗುತ್ತಿದೆ ಅಥವಾ ವದಂತಿಗಳನ್ನು ಹರಡಲಾಗುತ್ತಿದೆ ಅದರಲ್ಲಿ ಒಂದಿಷ್ಟು ಸತ್ಯಾಂಶವಿದೆ. ಇದಕ್ಕೆ ವ್ಯವಸ್ಥಿತ ತನಿಖೆಯ ಅಗತ್ಯವಿದೆ” ಎಂದು ಅವರು ಒತ್ತಾಯಿಸಿದ್ದಾರೆ.
ಇದಕ್ಕೂ ಮುನ್ನ, ಬುಧವಾರ ಬೆಳಗ್ಗೆ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಕಿರಣ್ ರಿಜಿಜು ವಿರೋಧ ಪಕ್ಷಗಳಿಗೆ ಧನ್ಯವಾದ ಸಲ್ಲಿಸಿದ್ದರು. “ಉಪ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಅವರಿಗೆ ತಮ್ಮ ಆತ್ಮಸಾಕ್ಷಿಯಂತೆ ಮತ ಚಲಾಯಿಸಿದ ಇಂಡಿಯಾ ಮೈತ್ರಿಕೂಟದ ಕೆಲವು ಸಂಸದರಿಗೆ ಧನ್ಯವಾದಗಳು. ಎನ್ಡಿಎ ಹಾಗೂ ನಮ್ಮ ಎಲ್ಲ ಮಿತ್ರ ಪಕ್ಷಗಳು ಒಗ್ಗಟ್ಟಾಗಿ ಉಳಿದಿವೆ. ವಿಧೇಯ, ದಕ್ಷ ಹಾಗೂ ನೈಜ ದೇಶಪ್ರೇಮಿಯನ್ನು ಭಾರತದ ನೂತನ ಉಪ ರಾಷ್ಟ್ರಪತಿಯನ್ನಾಗಿ ಆರಿಸಿದ ಎಲ್ಲರಿಗೂ ಅಭಿನಂದನೆಗಳು” ಎಂದು ಎಕ್ಸ್ ನಲ್ಲಿ ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದರು.
ವಿರೋಧ ಪಕ್ಷಗಳ ಎಲ್ಲ 315 ಸಂಸದರು ಒಗ್ಗಟ್ಟಾಗಿದ್ದಾರೆ ಎಂದು ಕಾಂಗ್ರೆಸ್ ಪ್ರತಿಪಾದಿಸಿತ್ತು. ಆದರೆ, ವಿರೋಧ ಪಕ್ಷಗಳ ಅಭ್ಯರ್ಥಿ ಬಿ.ಸುದರ್ಶನ್ ರೆಡ್ಡಿ ಅವರಿಗೆ ಕೇವಲ 300 ಮತಗಳು ಮಾತ್ರ ದೊರೆತಿದ್ದವು.
ಎನ್ಡಿಎ ಬಳಿ 427 ಮತಗಳಿದ್ದವು. ಈ ಮತಗಳೊಂದಿಗೆ ವೈಎಸ್ಆರ್ ಕಾಂಗ್ರೆಸ್ ಬೆಂಬಲದ ಕಾರಣಕ್ಕೆ 11 ಹೆಚ್ಚುವರಿ ಸಂಸದರ ಬೆಂಬಲ ದೊರೆತಿತ್ತು. ಹೀಗಾಗಿ ಎನ್ಡಿಎ ಒಕ್ಕೂಟದ ಒಟ್ಟು ಮತಗಳ ಸಂಖ್ಯೆ 438ಕ್ಕೆ ತಲುಪಿತ್ತು. ಹೀಗಿದ್ದೂ, ಎನ್ಡಿಎ ಅಭ್ಯರ್ಥಿ ರಾಧಾಕೃಷ್ಣನ್ ಅವರಿಗೆ 452 ಮತಗಳು ದೊರೆತಿದ್ದವು. ಅರ್ಥಾತ್ 14 ಮತಗಳು ಹೆಚ್ಚುವರಿಯಾಗಿ ದೊರೆತಿದ್ದವು. ಇದು ಅಡ್ಡ ಮತದಾನದ ವದಂತಿಗಳಿಗೆ ಕಾರಣವಾಗಿತ್ತು.