ಮರಾಠ ಮೀಸಲಾತಿ | ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ಆರಂಭಿಸಿದ ಜರಾಂಗೆ
ಮನೋಜ್ ಜರಾಂ | PTI
ಮುಂಬೈ, ಆ. 29: ಮರಾಠ ಮೀಸಲಾತಿ ಕುರಿತಂತೆ ಮರಾಠ ಮೀಸಲಾತಿ ಚಳುವಳಿ ನಾಯಕ ಮನೋಜ್ ಜರಾಂಗೆ ದಕ್ಷಿಣ ಮುಂಬೈಯ ಆಝಾದ್ ಮೈದಾನದಲ್ಲಿ ಶುಕ್ರವಾರ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ಆರಂಭಿಸಿದ್ದಾರೆ.
ಮರಾಠ ಸಮುದಾಯದ ಬೇಡಿಕೆ ಈಡೇರುವ ವರೆಗೆ ಉಪವಾಸ ಮುಷ್ಕರವನ್ನು ನಿಲ್ಲಿಸುವುದಿಲ್ಲ ಎಂದು ಅವರು ಪ್ರತಿಜ್ಞೆ ಮಾಡಿದ್ದಾರೆ.
ಜಲ್ನಾ ಜಿಲ್ಲೆಯ ತನ್ನ ಗ್ರಾಮದಿಂದ ಬುಧವಾರ ರ್ಯಾಲಿ ಆರಂಭಿಸಿರುವ ಜರಾಂಗೆ ಮುಂಬೈ ಪ್ರವೇಶಿಸುತ್ತಿದ್ದಂತೆ ವಾಸಿಯಲ್ಲಿ ಬೆಂಬಲಿಗರು ಬರ ಮಾಡಿಕೊಂಡರು.
ಇತರ ಹಿಂದುಳಿದ ವರ್ಗಗಳ (ಒಬಿಸಿ) ವಿಭಾಗದಲ್ಲಿ ಮರಾಠರಿಗೆ ಶೇ. 10 ಮೀಸಲಾತಿ ನೀಡುವಂತೆ 43 ವರ್ಷದ ಜಾರಂಗೆ ಆಗ್ರಹಿಸುತ್ತಿದ್ದಾರೆ.
ಇತರ ಹಿಂದುಳಿದ ವರ್ಗ (ಒಬಿಸಿ) ಗಳ ವಿಭಾಗದಲ್ಲಿ ಮೀಸಲಾತಿ ನೀಡುವ ಮೂಲಕ ಮರಾಠ ಸಮುದಾಯದ ಮನಸ್ಸು ಗೆಲ್ಲುವುದಕ್ಕೆ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ ಹಾಗೂ ಇತರ ಇಬ್ಬರು ಉಪ ಮುಖ್ಯಮಂತ್ರಿಗಳಿಗೆ ಇದು ಅತ್ಯುತ್ತಮ ಅವಕಾಶ ಎಂದು ಅವರು ಹೇಳಿದರು.
ಮುಂಬೈಯಲ್ಲಿ ಒಂದು ದಿನ ಪ್ರತಿಭಟನೆ ನಡೆಸಲು ರಾಜ್ಯ ಸರಕಾರ ಅವಕಾಶ ನೀಡಿದೆ. ಅನಂತರ ಹಿಂದಿರುಗಲು ಸೂಚಿಸಿದೆ. ಒಂದು ದಿನ ಪ್ರತಿಭಟನೆ ನಡೆಸಿ, ಬೇಡಿಕೆಯನ್ನು ಈಡೇರಿಸಿಕೊಳ್ಳುವುದು ಹೇಗೆ. ಮರಾಠ ಸಮುದಾಯವನ್ನು ಒಬಿಸಿಯಲ್ಲಿ ಸೇರಿಸಲು ಸರಕಾರ ಸಿದ್ಧವಾಗಿದ್ದರೆ, ನಾವು ಪ್ರತಿಭಟನೆಯನ್ನು ಹಿಂಪಡೆಯಲು ಸಿದ್ಧ. ಸರಕಾರ ಸಿದ್ದವಿಲ್ಲದೇ ಇದ್ದರೆ, ನಾವು ಮುಂಬೈಯಲ್ಲೇ ಇರುತ್ತೇವೆ ಹಾಗೂ ನಮ್ಮ ಬೇಡಿಕಗಳ ಈಡೇರಿಕೆಗೆ ಆಗ್ರಹಿಸುತ್ತೇವೆ ಎಂದು ಜರಾಂಗೆ ಹೇಳಿದ್ದಾರೆ.
‘‘ಈ ಬಾರಿ ನಮ್ಮ ಬೇಡಿಕೆಗಳು ಈಡೇರುವ ವರೆಗೆ ಮುಂಬೈ ಬಿಟ್ಟು ಹೋಗದಿರಲು ನಾವು ನಿರ್ಧರಿಸಿದ್ದೇವೆ. ನಾನು ಗುಂಡಿಗೆ ಎದೆ ಒಡ್ಡಲು ಕೂಡ ಸಿದ್ಧನಿದ್ದೇನೆ. ಮುಖ್ಯಮಂತ್ರಿ ಹಾಗೂ ಇಬ್ಬರು ಉಪ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಯನ್ನು ಸಮಗ್ರವಾಗಿ ಪರಿಶೀಲಿಸಬೇಕು’’ ಎಂದು ಜರಾಂಗೆ ಹೇಳಿದ್ದಾರೆ.