×
Ad

ಮರಾಠಾ ಮೀಸಲಾತಿ ಮಸೂದೆ: ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಂಗೀಕಾರ

Update: 2024-02-20 19:48 IST

Photo: PTI 

ಮುಂಬೈ: ಮರಾಠಾ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ. 10ರಷ್ಟು ಮೀಸಲಾತಿ ಒದಗಿಸುವ ಮಸೂದೆಯನ್ನು ಮಂಗಳವಾರ ಮಹಾರಾಷ್ಟ್ರ ವಿಧಾನಸಭೆಯು ಅಂಗೀಕರಿಸಿದೆ. ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂದೆ ಈ ಮಸೂದೆಯನ್ನು ಮಂಡಿಸಿದ ಕೆಲವೇ ನಿಮಿಷಗಳಲ್ಲಿ ಅಂಗೀಕಾರಗೊಂಡಿತು.

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಸಚಿವ ಛಗನ್ ಭುಜಬಲ್ ಅವರ ಆಕ್ಷೇಪವನ್ನು ಹೊರತುಪಡಿಸಿ, ಮಹಾರಾಷ್ಟ್ರ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿರುವ ಸಮುದಾಯಗಳ ಮಸೂದೆ, 2024 ಮಹಾರಾಷ್ಟ್ರ ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಂಗೀಕಾರಗೊಂಡಿತು. ಹಿಂದುಳಿದ ವರ್ಗಗಳ ಅಡಿ ಮರಾಠಾ ಸಮುದಾಯಕ್ಕೆ ಮೀಸಲಾತಿ ಒದಗಿಸುವುದನ್ನು ಛಗನ್ ಭುಜಬಲ್ ಮೊದಲಿನಿಂದಲೂ ವಿರೋಧಿಸುತ್ತಾ ಬರುತ್ತಿದ್ದಾರೆ.

ಮುಖ್ಯಮಂತ್ರಿ ಏಕನಾಥ್ ಶಿಂದೆ ಈ ಮಸೂದೆಯನ್ನು ವಿಧಾನ ಪರಿಷತ್ತಿನಲ್ಲೂ ಮಂಡಿಸಲಿದ್ದು, ಅಲ್ಲಿ ಅಂಗೀಕಾರಗೊಂಡ ನಂತರ ಕಾಯ್ದೆಯಾಗಿ ಜಾರಿಯಾಗಲಿದೆ.

ಇದಕ್ಕೂ ಮುನ್ನ, ಫೆಬ್ರವರಿ 17ರಂದು ಮರಾಠಾ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಫೆಬ್ರವರಿ 20ರಂದು ಕರೆಯಲಾಗಿರುವ ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಲಾಗುವುದು ಎಂದು ಮುಖ್ಯಮಂತ್ರಿ ಏಕನಾಥ್ ಶಿಂದೆ ಹಾಗೂ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಮರಾಠಾ ಮೀಸಲಾತಿ ಹೋರಾಟಗಾರ ಮನೋಜ್ ಜರಂಗೆ ಪಾಟೀಲ್ ಅವರಿಗೆ ಭರವಸೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News