×
Ad

ನನಗೆ ತುಂಡುಡುಗೆ ಧರಿಸುವ ಹುಡುಗಿಯರು ಇಷ್ಟವಿಲ್ಲ: ಸಚಿವ ಕೈಲಾಶ್ ವಿಜಯವರ್ಗೀಯ ವಿವಾದಾತ್ಮಕ ಹೇಳಿಕೆ

Update: 2025-06-06 21:25 IST

ಸಚಿವ ಕೈಲಾಶ್ ವಿಜಯವರ್ಗೀಯ | PTI

ಭೋಪಾಲ: ‘‘ನನಗೆ ತುಂಡುಡುಗೆ ಧರಿಸುವ ಹುಡುಗಿಯರು ಇಷ್ಟವಿಲ್ಲ’’ ಎಂದು ಈ ಬಾರಿ ಹೇಳುವ ಮೂಲಕ ಮಧ್ಯಪ್ರದೇಶದ ಹಿರಿಯ ಸಚಿವ ಹಾಗೂ ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಹೊಸ ವಿವಾದ ಹುಟ್ಟು ಹಾಕಿದ್ದಾರೆ.

ಇಂದೋರ್‌ ನಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಇಂದೋರ್‌ ನ ಮೇಯರ್ ಕೂಡ ಆಗಿದ್ದ ವಿಜಯವರ್ಗೀಯ, ‘‘ಪಶ್ಚಿಮದಲ್ಲಿ ತುಂಡುಡುಗೆ ಧರಿಸುವ ಮಹಿಳೆಯರನ್ನು ಸುಂದರಿ ಎಂದು ಪರಿಗಣಿಸಲಾಗುತ್ತದೆ. ಇದನ್ನು ನಾನು ಒಪ್ಪಲಾರೆ. ನಾವು ಭಾರತದಲ್ಲಿ ಹುಡುಗಿ ಉತ್ತಮ ಉಡುಪು ತೊಟ್ಟರೆ, ಆಭರಣ ಧರಿಸಿದರೆ ಹಾಗೂ ತನ್ನನ್ನು ತಾನು ಅಲಂಕರಿಸಿಕೊಂಡರೆ ಅವಳನ್ನು ಸುಂದರಿ ಎಂದು ಪರಿಗಣಿಸುತ್ತೇವೆ’’ ಎಂದಿದ್ದಾರೆ.

ಸಣ್ಣ ಭಾಷಣ ಹಾಗೂ ತುಂಡುಡುಗೆ ನಡುವೆ ಹೋಲಿಕೆ ಮಾಡಿದ ರಾಜ್ಯದ ನಗರಾಭಿವೃದ್ಧಿ ಹಾಗೂ ವಸತಿ ಸಚಿವರು, ಪಾಶ್ಚಿಮಾತ್ಯ ದೇಶಗಳಲ್ಲಿ ತುಂಡುಡುಗೆ ಧರಿಸಿದ ಮಹಿಳೆಯನ್ನು ತುಂಬಾ ಸುಂದರಿ ಎಂದು ಪರಿಗಣಿಸಲಾಗುತ್ತದೆ ಹಾಗೂ ಕಡಿಮೆ ಮಾತನಾಡುವ ನಾಯಕನನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ. ನನಗೆ ಇದರಲ್ಲಿ ನಂಬಿಕೆ ಇಲ್ಲ. ಮಹಿಳೆ ದೇವತೆಯ ಪ್ರತಿರೂಪ ಎಂದು ನಾನು ನಂಬುತ್ತೇನೆ. ಅವಳು ಒಳ್ಳೆಯ ಬಟ್ಟೆಯನ್ನು ಧರಿಸಬೇಕು. ತುಂಡುಡುಗೆ ಧರಿಸಿದರೆ ಮಹಿಳೆಯರು ಆಕರ್ಷಕವಾಗಿ ಕಾಣಿಸುವುದಿಲ್ಲ ಎಂದಿದ್ದಾರೆ.

‘‘ಕೆಲವೊಮ್ಮೆ ಹುಡುಗಿಯರು ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಬರುತ್ತಾರೆ. ಆಗ ನಾನು ಅವರಿಗೆ ಬೇಟಾ, ಮುಂದಿನ ಭಾರಿ ಉತ್ತಮ ಉಡುಪು ಧರಿಸಿ ಬಾ. ಆಗ ನಾವು ಫೋಟೊ ತೆಗೆದುಕೊಳ್ಳೋಣ ಎಂದು ಹೇಳುತ್ತೇನೆ’’ ಎಂದು ಅವರು ಹೇಳಿದ್ದಾರೆ.

ವಿಜಯ ವರ್ಗೀಯ ಅವರು ಮಹಿಳೆಯರ ಕುರಿತು ಬಹಿರಂಗವಾಗಿ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. 2022ರಲ್ಲಿ ಇಂದೋರ್‌ನಲ್ಲಿ ನಡೆದ ಹನುಮಾನ್ ಜಯಂತಿ ಕಾರ್ಯಕ್ರಮದಲ್ಲಿ ಅವರು, ‘‘ನಾನು ಹನುಮಾನ್ ಜಯಂತಿಯಂದು ಸುಳ್ಳು ಹೇಳುವುದಿಲ್ಲ. ಇಂದಿನ ದಿನಗಳಲ್ಲಿ ಹುಡುಗಿಯರು ಕೊಳಕು ಬಟ್ಟೆ ಧರಿಸುತ್ತಾರೆ. ನಾವು ಮಹಿಳೆಯರನ್ನು ದೇವತೆಗಳು ಎಂದು ಕರೆಯುತ್ತೇವೆ. ಆದರೆ, ಅವರು ಹಾಗೆ ಕಾಣುವುದಿಲ್ಲ. ಅವರು ಶೂರ್ಪನಕಿಯಂತೆ ಕಾಣುತ್ತಾರೆ. ದೇವರು ನಿಮಗೆ ಸುಂದರವಾದ ದೇಹ ನೀಡಿದ್ದಾನೆ. ಕನಿಷ್ಠ ಯೋಗ್ಯವಾದ ಬಟ್ಟೆ ಧರಿಸಿ. ನಿಮ್ಮ ಮಕ್ಕಳಿಗೆ ಮೌಲ್ಯಗಳನ್ನು ಕಲಿಸಿ’’ ಎಂದು ಹೇಳಿದ್ದರು.

ವಿಜಯ ವರ್ಗೀಯ ಅವರು ಈ ಹಿಂದೆ ಹಲವು ವಿಷಯಗಳ ಕುರಿತು ಇಂತಹುದೇ ಹೇಳಿಕೆ ನೀಡುವ ಮೂಲಕ ಟೀಕೆಗೆ ಗುರಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News