×
Ad

ದೇಶವನ್ನು ನಕ್ಸಲ್ ಮುಕ್ತ ಮಾಡುವವರೆಗೂ ಮೋದಿ ಸರಕಾರ ವಿರಮಿಸುವುದಿಲ್ಲ: ಅಮಿತ್ ಶಾ

"ಮಾರ್ಚ್ 2026ರರೊಳಗಾಗಿ ಭಾರತ ನಕ್ಸಲ್ ಮುಕ್ತ"

Update: 2025-09-03 16:08 IST

ಅಮಿತ್‌ ಶಾ (File Photo: PTI)

ಹೊಸದಿಲ್ಲಿ: ಮಾರ್ಚ್ 2026ರರೊಳಗೆ ಭಾರತ ನಕ್ಸಲ್ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಘೋಷಿಸಿದ್ದಾರೆ.

ಇಲ್ಲಿ ಆಯೋಜನೆಗೊಂಡಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಮಾತನಾಡಿದ ಅಮಿತ್ ಶಾ, ದೇಶವನ್ನು ನಕ್ಸಲ್ ಮುಕ್ತ ಮಾಡುವವರೆಗೂ ಮೋದಿ ನೇತೃತ್ವದ ಕೇಂದ್ರ ಸರಕಾರ ವಿರಮಿಸುವುದಿಲ್ಲ ಎಂದು ಶಪಥ ಮಾಡಿದರು.

ನಕ್ಸಲರ ಅಡಗುತಾಣಗಳನ್ನು ನಾಶಗೊಳಿಸುವ ಸಲುವಾಗಿ ಛತ್ತೀಸ್ ಗಢದ ಕಾರೇಗುಟ್ಟದಲ್ಲಿ ‘ಆಪರೇಷನ್ ಬ್ಲಾಕ್ ಫಾರೆಸ್ಟ್’ ಅನ್ನು ನಡೆಸಲಾಯಿತು. ಈ ಕಾರ್ಯಾಚರಣೆಯಲ್ಲಿ CRPF, ಛತ್ತೀಸ್ ಗಢ ಪೊಲೀಸ್, ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಹಾಗೂ ಕೋಬ್ರಾ ಪಡೆ ಭಾಗಿಯಾಗಿದ್ದವು ಎಂದು ಅವರು ತಿಳಿಸಿದರು.

‘ಆಪರೇಷನ್ ಬ್ಲಾಕ್ ಫಾರೆಸ್ಟ್’ ಕಾರ್ಯಾಚರಣೆಯಲ್ಲಿ ನಮ್ಮ ಯೋಧರು ತಮ್ಮ ಶೌರ್ಯ ಮೆರೆದಿದ್ದು, ಇದು ನಕ್ಸಲರ ವಿರುದ್ಧದ ಕಾರ್ಯಾಚರಣೆಯಲ್ಲಿ ಸುವರ್ಣ ಅಧ್ಯಾಯವಾಗಿದೆ ಎಂದು ಅವರು ಶ್ಲಾಘಿಸಿದರು.

ಪರ್ವತ ಪ್ರದೇಶದಲ್ಲಿ ಅಡಗಿದ್ದ ನಕ್ಸಲರ ಶಿಬಿರಗಳನ್ನು ನಾಶಗೊಳಿಸುವುದು ಸುಲಭಸಾಧ್ಯವಾಗಿರಲಿಲ್ಲ. ಎತ್ತರ ಪ್ರದೇಶವಾದ್ದರಿಂದ, ಅತಿಯಾದ ತಾಪಮಾನ ಹಾಗೂ ಸುಧಾರಿತ ಸ್ಫೋಟಕ ಸಾಧನಗಳ ಬೆದರಿಕೆ ಇತ್ತು. ಹೀಗಿದ್ದೂ, ನಕ್ಸಲರ ಪ್ರಮುಖ ನೆಲೆಯಾದ ಕಾರೇಗುಟ್ಟವನ್ನು ನಾಶಪಡಿಸುವಲ್ಲಿ ಭದ್ರತಾ ಪಡೆಗಳು ಯಶಸ್ವಿಯಾಗಿವೆ ಎಂದು ಅವರು ಹೇಳಿದರು.

ದೇಶದಲ್ಲಿ ಕಡಿಮೆ ಅಭಿವೃದ್ಧಿ ಹೊಂದಿರುವ ಪ್ರದೇಶಗಳಲ್ಲಿ ನಕ್ಸಲರು ತೀವ್ರ ಹಾನಿಯನ್ನೆಸಗಿದ್ದಾರೆ. ಪ್ರಮುಖ ಮೂಲ ಸೌಕರ್ಯಗಳಾದ ಶಾಲೆ, ಆಸ್ಪತ್ರೆಗಳ ನಿರ್ಮಾಣ ಸೇರಿದಂತೆ ಸರಕಾರಿ ಕಲ್ಯಾಣ ಯೋಜನೆಗಳಿಗೆ ಅಡ್ಡಿಪಡಿಸಿದ್ದಾರೆ ಎಂದು ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News