ಪಾಟ್ನಾ | ಜನಸುರಾಜ್ ಪಕ್ಷದ ಕಾರ್ಯಕರ್ತನ ಹತ್ಯೆ ಪ್ರಕರಣ : ಜೆಡಿಯು ಅಭ್ಯರ್ಥಿಯ ಬಂಧನ
PC | timesofindia
ಪಾಟ್ನಾ: ಜನಸುರಾಜ್ ಪಕ್ಷದ ಕಾರ್ಯಕರ್ತ ದುಲಾರ್‍ಚಂದ್ ಯಾದವ್ ಅವರ ಹತ್ಯೆಗೆ ಸಂಬಂಧಿಸಿದಂತೆ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸಂಯುಕ್ತ ಜನತಾದಳ ಅಭ್ಯರ್ಥಿಯಾಗಿ ಕಣದಲ್ಲಿರುವ ಶಾಸಕ ಅನಂತ ಸಿಂಗ್‍ನನ್ನು ಶನಿವಾರ ರಾತ್ರಿ ಬಿಹಾರ ಪೊಲೀಸರು ಬಂಧಿಸಿದ್ದಾರೆ.
ಪಾಟ್ನಾ ಹಿರಿಯ ಪೊಲೀಸ್ ಅಧೀಕ್ಷಕ ಕಾರ್ತಿಕೇಯ ಶರ್ಮಾ ಈ ಬಂಧನವನ್ನು ದೃಢಪಡಿಸಿದ್ದು, ಅನಂತ್ ಸಿಂಗ್ ಹಾಗೂ ಅವರ ಇಬ್ಬರು ಸಹಚರರಾದ ಮಣಿಕಂಠ ಠಾಕೂರ್ ಮತ್ತು ರಂಜೀತ್ ರಾಮ್ ಅವರನ್ನು ಬೆಡ್ನಾ ಗ್ರಾಮದಿಂದ ಬಂಧಿಸಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಸುಮಾರು 150 ಮಂದಿ ಪೊಲೀಸರ ತಂಡ ಪಾಟ್ನಾ ಸಮೀಪದ ಸಿಂಗ್ ಅವರ ಬರ್ಹ್ ನಿವಾಸದಲ್ಲಿ ಶನಿವಾರ ರಾತ್ರಿ ಕಾರ್ಯಾಚರಣೆ ಕೈಗೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಬಿಹಾರ ರಾಜಕೀಯದಲ್ಲಿ ಪ್ರಬಲ ವ್ಯಕ್ತಿ ಎಂದೇ ಗುರುತಿಸಿಕೊಂಡಿರುವ ಸಿಂಗ್‍ನನ್ನು ಇದೀಗ ಪೊಲೀಸರು ವಿಚಾರಣೆಗಾಗಿ ಕಸ್ಟಡಿಯಲ್ಲಿ ಇರಿಸಿಕೊಂಡಿದ್ದಾರೆ. ಭಾನುವಾರ ಮಧ್ಯಾಹ್ನ ನಡೆಯುವ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚಿನ ವಿವರಗಳನ್ನು ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
ಅ.30ರಂದು ಕಣದಲ್ಲಿರುವ ಇಬ್ಬರು ಅಭ್ಯರ್ಥಿಗಳ ನಡುವೆ ನಡೆದ ಸಂಘರ್ಷದಲ್ಲಿ ಕಲ್ಲು ತೂರಾಟ ನಡೆದು ಗಾಯಗಳಾಗಿದ್ದವು. ಘಟನೆ ಬಳಿಕ ಒಂದು ಮೃತದೇಹ ಪತ್ತೆಯಾಗಿತ್ತು. ಮೃತ ವ್ಯಕ್ತಿಯನ್ನು 75 ವರ್ಷ ವಯಸ್ಸಿನ ದುಲೇರ್‍ಚಂದ್ ಎಂದು ಗುರುತಿಸಲಾಗಿದ್ದು, ಅವರು ಘಟನೆ ನಡೆದ ಗ್ರಾಮದ ನಿವಾಸಿ ಎಂದು ಹೇಳಲಾಗಿದೆ.
ಎರಡೂ ಕಡೆಯವರು ಪರಸ್ಪರರ ವಿರುದ್ಧ ದೂರ ನೀಡಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪುರಾವೆಗಳ ಆಧಾರದಲ್ಲಿ ಹಾಗೂ ಪ್ರತ್ಯಕ್ಷದರ್ಶಿಗಳ ಹೇಳಿಕೆ ಮತ್ತು ಮರಣೋತ್ತರ ಪರೀಕ್ಷೆಯ ಬಳಿಕ ಮಾದರಿ ನೀತಿ ಸಂಹಿತೆ ಉಲ್ಲಂಘನೆ ದೃಢಪಟ್ಟಿದ್ದು, ಇದು ಗಂಭೀರ ವಿಚಾರ ಎಂದು ಶರ್ಮಾ ವಿವರಿಸಿದ್ದಾರೆ.