ಸ್ವಂತ ಪುತ್ರಿಯ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಅವಕಾಶ ಮಾಡಿಕೊಟ್ಟ ಬಿಜೆಪಿ ಮಾಜಿ ಪದಾಧಿಕಾರಿ, ಪ್ರಿಯಕರ ಬಂಧನ
ಡೆಹ್ರಾಡೂನ್: ಅಪ್ರಾಪ್ತ ವಯಸ್ಸಿನ ಪುತ್ರಿಯ ಮೇಲೆ ಪದೇ ಪದೇ ಸಾಮೂಹಿಕ ಅತ್ಯಾಚಾರ ನಡೆಯಲು ಅವಕಾಶ ಮಾಡಿಕೊಟ್ಟ ಆರೋಪದಲ್ಲಿ ಬಿಜೆಪಿಯ ಮಾಜಿ ಪದಾಧಿಕಾರಿಯಾಗಿರುವ ಸಂತ್ರಸ್ತೆಯ ತಾಯಿ ಹಾಗೂ ಆಕೆಯ ಪ್ರಿಯಕರನನ್ನು ಉತ್ತರಾಖಂಡ ಪೊಲೀಸರು ಬಂಧಿಸಿದ್ದಾರೆ.ಪ್ರಿಯಕರ ಮತ್ತು ಆತನ ಸ್ನೇಹಿತರು ಸ್ವಂತ ಪುತ್ರಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಯಲು ಅನುವು ಮಾಡಿಕೊಟ್ಟ ಆರೋಪವನ್ನು ಈಕೆ ಎದುರಿಸುತ್ತಿದ್ದಾಳೆ.
ಆರೋಪಿತ ಮಹಿಳೆ ಬಿಜೆಪಿಯ ಮಹಿಳಾ ಮೋರ್ಚಾ ಪದಾಧಿಕಾರಿಯಾಗಿ ಈ ಹಿಂದೆ ಸೇವೆ ಸಲ್ಲಿಸಿದ್ದಳು. ಗೃಹವ್ಯಾಜ್ಯದಿಂದಾಗಿ ಗಂಡನಿಂದ ಪ್ರತ್ಯೇಕವಾಗಿ ವಾಸವಿದ್ದಳು. ಪುತ್ರ ತಂದೆಯ ಜತೆಗಿದ್ದರೆ, ಈಕೆ ಸುಮಿತ್ ಪಟ್ವಾಲ್ ಎಂಬ ಪ್ರಿಯಕರ ಹಾಗೂ ಪುತ್ರಿಯ ಜತೆ ವಾಸವಿದ್ದಳು.
ಅಪ್ರಾಪ್ತ ವಯಸ್ಸಿನ ಪುತ್ರಿ ತಂದೆಯ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಭಯಾನಕ ಘಟನಾವಳಿ ಬೆಳಕಿಗೆ ಬಂದಿದೆ. ಪುತ್ರಿಯ ಹತಾಶ ಮತ್ತು ವಿಮುಖ ಸ್ಥಿತಿಯನ್ನು ನೋಡಿದ ತಂದೆ ಆಕೆಯ ಜತೆ ಮಾತುಕತೆ ನಡೆಸಿದಾಗ ಭಯಾನಕ ಅನುಭವವನ್ನು ತಂದೆಯ ಜತೆ ಹಂಚಿಕೊಂಡಿದ್ದಾಳೆ. ಮಂಗಳವಾರ ಸಂಜೆ ತಂದೆ, ಪುತ್ರಿಯನ್ನು ರಾಣಿಪುರ ಪೊಲೀಸ್ ಠಾಣೆಗೆ ಕರೆತಂದು ದೂರು ನೀಡಿದ್ದಾರೆ.
"ಕಳೆದ ಜನವರಿಯಲ್ಲಿ ಪುತ್ರಿಯನ್ನು ವಿಹಾರಕ್ಕೆ ಕರೆದೊಯ್ಯುವ ನೆಪದಲ್ಲಿ ಪತ್ನಿ ತನ್ನ ಪ್ರಿಯಕರ ಸುಮಿತ್ ಪಟ್ವಾಲ್ ಹಾಗೂ ಆತನ ಸ್ನೇಹಿತ ಶುಭಂ ಜತೆಗೆ ಬಿಎಚ್‍ಇಎಲ್ ಸ್ಟೇಡಿಯಂ ಪ್ರದೇಶಕ್ಕೆ ಕರೆದೊಯ್ದಿದ್ದಳು. ಅಲ್ಲಿ ಮದ್ಯಪಾನ ಮಾಡಿ ತಾಯಿಯ ಸಮ್ಮತಿಯೊಂದಿಗೆ ಇಬ್ಬರೂ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದರು. ಬಳಿಕ ಆಗ್ರಾ, ವೃಂದಾವನ ಮತ್ತು ಹರಿದ್ವಾರದ ಹೋಟೆಲ್‍ಗಳಲ್ಲಿ ಇಂಥದ್ದೇ ಸಾಮೂಹಿಕ ಅತ್ಯಾಚಾರಗಳು ನಡೆದಿದ್ದವು ಎಂಬ ಅಂಶ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಇದನ್ನು ಬಹಿರಂಗಪಡಿಸಿದರೆ ಸಂತ್ರಸ್ತೆ ಮತ್ತು ತಂದೆಯನ್ನು ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು" ಎಂದು ದೂರಿನಲ್ಲಿ ವಿವರಿಸಲಾಗಿದೆ.