×
Ad

ತಮಿಳುನಾಡಿಗೆ ಸಮಗ್ರ ಶಿಕ್ಷಾ ಯೋಜನೆಯಡಿ ನಿಧಿ ಬಿಡುಗಡೆಗೆ ಒತ್ತಾಯಿಸಿ ಸಂಸದ ಶಶಿಕಾಂತ್ ಸೆಂಥಿಲ್ ಉಪವಾಸ ಸತ್ಯಾಗ್ರಹ; ಆಸ್ಪತ್ರೆಗೆ ದಾಖಲು

Update: 2025-08-31 16:19 IST

Photo credit: X/@s_kanth

ಚೆನ್ನೈ: ಸಮಗ್ರ ಶಿಕ್ಷಾ ಯೋಜನೆಯ ನಿಧಿಯಲ್ಲಿ ತಮಿಳುನಾಡಿಗೆ ಸಿಗಬೇಕಾದ ಪಾಲನ್ನು ನೀಡುವಂತೆ ಆಗ್ರಹಿಸಿ ತಿರುವಳ್ಳೂರು ಸಂಸದ ಶಶಿಕಾಂತ್ ಸೆಂಥಿಲ್ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ 2,152 ಕೋಟಿ ರೂ. ಎಸ್ಎಸ್ಎ ನಿಧಿಯನ್ನು ಬಿಡುಗಡೆ ಮಾಡದೆ ತಡೆಹಿಡಿದಿರುವ ನಿರ್ಧಾರದ ವಿರುದ್ಧ ಆಗಸ್ಟ್ 29ರಂದು ಶಶಿಕಾಂತ್ ಸೆಂಥಿಲ್ ಉಪವಾಸ ಸತ್ಯಾಗ್ರಹ ಆರಂಭಿಸಿದ್ದಾರೆ. ಉಪವಾಸ ಸತ್ಯಾಗ್ರಹದ ಎರಡನೇ ದಿನವಾದ ಶನಿವಾರ ರಾತ್ರಿ ಅಧಿಕ ರಕ್ತದೊತ್ತಡದ ಹಿನ್ನೆಲೆಯಲ್ಲಿ ಸೆಂಥಿಲ್ ಅವರನ್ನು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು.

ಕೇಂದ್ರ ಸರಕಾರದ ನಿರ್ಧಾರ ತಮಿಳುನಾಡಿನ 43 ಲಕ್ಷ ವಿದ್ಯಾರ್ಥಿಗಳು ಮತ್ತು 2.2 ಲಕ್ಷ ಶಿಕ್ಷಕರ ಭವಿಷ್ಯವನ್ನು ತೀವ್ರವಾಗಿ ಅನಿಶ್ಚಿತತೆಗೆ ತಳ್ಳಿದೆ ಎಂದು ಸೆಂಥಿಲ್ ಹೇಳಿದರು.

“ನಿನ್ನೆ ರಕ್ತದೊತ್ತಡ ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗಿದ್ದೇನೆ. ವೈದ್ಯರು ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದರೂ, ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ತಮಿಳುನಾಡಿಗೆ ಸಿಗಬೇಕಾದ ಎಸ್ಎಸ್ಎ ನಿಧಿ ಬಿಡುಗಡೆ ಮಾಡುವವರೆಗೂ ನಾನು ಉಪವಾಸವನ್ನು ಮುಂದುವರಿಸುತ್ತೇನೆ. ತಮಿಳುನಾಡಿನ ಜನರು ಪ್ರಜಾಪ್ರಭುತ್ವದ ರೀತಿಯಲ್ಲಿ ತಮ್ಮ ಧ್ವನಿಯನ್ನು ಎತ್ತಬೇಕು, ಸೈದ್ಧಾಂತಿಕ ಭಿನ್ನಾಭಿಪ್ರಾಯಗಳ ಮೇಲೆ ರಾಜಕೀಯ ಮಾಡದೆ ರಾಜ್ಯಕ್ಕೆ ಸಿಗಬೇಕಾದ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಅವರಿಗೆ ಒತ್ತಾಯಿಸಬೇಕು” ಎಂದು ಸಂಸದ ಸಸಿಕಾಂತ್ ಸೆಂಥಿಲ್ ಎಕ್ಸ್‌ನಲ್ಲಿನ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News