ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರ ಸೋಗಿನಲ್ಲಿ ಲಂಡನ್ ಗೆ ಅಕ್ರಮ ಪ್ರಯಾಣ: ಮುಂಬೈ ವಿಮಾನ ನಿಲ್ದಾಣದಲ್ಲಿ 8 ಮಂದಿಯ ಬಂಧನ
ಸಾಂದರ್ಭಿಕ ಚಿತ್ರ | PC : PTI
ಮುಂಬೈ: ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳ ಸೋಗು ಧರಿಸಿ ಲಂಡನ್ ಗೆ ಅಕ್ರಮವಾಗಿ ಪ್ರಯಾಣ ಬೆಳೆಸಲಿದ್ದ ಎಂಟು ಮಂದಿಯನ್ನು ಛತ್ರಪತಿ ಶಿವಾಜಿ ಮಹಾರಾಜ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮುಂಬೈ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹರ್ಯಾಣ ಮೂಲದ ಖಾಸಗಿ ವಿಶ್ವವಿದ್ಯಾಲಯವೊಂದರ ವಿದ್ಯಾರ್ಥಿಗಳಂತೆ ಸೋಗು ಹಾಕಿದ್ದ ಏಳು ಮಂದಿ ಹಾಗೂ ಪ್ರಾಧ್ಯಾ ಪಕನಂತೆ ನಟಿಸಿದ್ದ ಓರ್ವ ವ್ಯಕ್ತಿಯ ವಿರುದ್ಧ ಮಾನವ ಕಳ್ಳ ಸಾಗಣೆ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಬ್ರಿಟನ್ ನ ವೀಸಾ ಪಡೆಯಲು ಆರೋಪಿಗಳು ತಿರುಚಿದ ದಾಖಲೆಗಳು ಹಾಗೂ ಸುಳ್ಳು ಮಾಹಿತಿಯನ್ನು ಒದಗಿಸಿದ್ದರು ಎಂದು ಅವರು ತಿಳಿಸಿದ್ದಾರೆ.
ಆರೋಪಿಗಳು ಜಿದ್ದಾ ಮೂಲಕ ಲಂಡನ್ ಗೆ ತೆರಳುತ್ತಿದ್ದರು. ಅವರ ಅಕ್ರಮ ವಲಸೆಯನ್ನು ವ್ಯವಸ್ಥೆಗೊಳಿಸಲು ಅವರ ಏಜೆಂಟ್ ತಲಾ 20 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದ ಎಂದು ಅವರು ಹೇಳಿದ್ದಾರೆ.
ಈ ಪೈಕಿ ಇಬ್ಬರು ಬ್ರಿಟನ್ ಭೇಟಿಯ ವೀಸಾ ಮೇಲೆ ಲಂಡನ್ ಗೆ ಪ್ರಯಾಣಿಸುತ್ತಿದ್ದುದನ್ನು ವಲಸೆ ದಳದ ಅಧಿಕಾರಿಗಳು ಮೊದಲಿಗೆ ಪತ್ತೆ ಹಚ್ಚಿದರು ಎಂದು ಅವರು ತಿಳಿಸಿದ್ದಾರೆ.
ಹರ್ಯಾಣ ವಿಶ್ವವಿದ್ಯಾಲಯದ ಸೂಚನೆ ಮೇರೆಗೆ ನಾನು ಹಾಗೂ ಇನ್ನಿತರ ಏಳು ಮಂದಿ ಲಂಡನ್ ಗೆ ಪ್ರಯಾಣ ಬೆಳೆಸಿದ್ದೆವು ಎಂದು ಪ್ರಾಧ್ಯಾ ಪಕನಂತೆ ನಟಿಸಿದ್ದ ಆರೋಪಿ ಪೊಲೀಸರಿಗೆ ತಿಳಿಸಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುಂದಿನ ಕ್ರಮಕ್ಕಾಗಿ ಎಂಟು ಮಂದಿ ಆರೋಪಿಗಳನ್ನು ಸಹರ್ ಠಾಣೆ ಪೊಲಿಸರ ವಶಕ್ಕೆ ಒಪ್ಪಿಸಲಾಗಿದ್ದು, ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 143 (ಮಾನವ ಕಳ್ಳ ಸಾಗಣೆ), ಸೆಕ್ಷನ್ 336 (2) (ತಿರುಚುವಿಕೆ) ಮತ್ತಿತರ ಸೆಕ್ಷನ್ ಗಳು ಹಾಗೂ ಪಾಸ್ ಪೋರ್ಟ್ ಕಾಯ್ದೆಯ ವಿವಿಧ ಸೆಕ್ಷನ್ ಗಳಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.