ಪುಣೆ: ಸಾಹಿತಿ ನಾಮದೇವ ಜಾಧವ್ ಮುಖಕ್ಕೆ ಕಪ್ಪುಬಣ್ಣ ಎರಚಿದ ಎನ್ ಸಿ ಪಿ ಕಾರ್ಯಕರ್ತರು
Update: 2023-11-19 22:48 IST
Photo: ANI
ಪುಣೆ: ಎನ್ ಸಿ ಪಿ ವರಿಷ್ಠ ಶರದ ಪವಾರ್ ಅವರ ಬೆಂಬಲಿಗರು ಸಾಹಿತಿ-ಲೇಖಕ ನಾಮದೇವ ಜಾಧವ್ ಅವರ ಮುಖಕ್ಕೆ ಕಪ್ಪುಬಣ್ಣವನ್ನು ಎರಚಿದ ಘಟನೆ ಶನಿವಾರ ಮಹಾರಾಷ್ಟ್ರದ ಪುಣೆ ನಗರದಲ್ಲಿ ನಡೆದಿದೆ.
ಪವಾರ್ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಶಿಕ್ಷಣ ಮತ್ತು ಸರಕಾರಿ ಉದ್ಯೋಗಗಳಲ್ಲಿ ಒಬಿಸಿ ವರ್ಗದಡಿ ಮರಾಠಾ ಸಮುದಾಯಕ್ಕೆ ಸಿಗಬೇಕಿದ್ದ ಮೀಸಲಾತಿ ಹಕ್ಕನ್ನು ನೀಡಿರಲಿಲ್ಲ ಎಂದು ಜಾಧವ ಈ ಹಿಂದೆ ಆರೋಪಿಸಿದ್ದರು.
ಶನಿವಾರ ಜಾಧವ ಪತ್ರಕರ್ತರ ಸಂಘದ ಬಳಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡುತ್ತಿದ್ದಾಗ ಪವಾರ್ ಬೆಂಬಲಿಗರು ಅವರ ಮುಖಕ್ಕೆ ಕಪ್ಪುಬಣ್ಣವನ್ನು ಎರಚಿದರು. ಅವರು ಪವಾರ್ರನ್ನು ಬೆಂಬಲಿಸಿ ಘೋಷಣೆಗಳನ್ನೂ ಕೂಗುತ್ತಿದ್ದರು.
ಪೊಲೀಸರು ಮಧ್ಯಪ್ರವೇಶಿಸಿ ಜಾಧವ್ರನ್ನು ರಕ್ಷಿಸಿದರು.
ಘಟನೆಯ ಹೊಣೆಯನ್ನು ಹೊತ್ತುಕೊಂಡಿರುವ ಪುಣೆ ಎನ್ಸಿಪಿ ವರಿಷ್ಠ ಪ್ರಶಾಂತ ಜಗತಾಪ್ ಅವರು,ಪವಾರ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು ಅವರ ಮುಖದ ಮೇಲೆ ಕಪ್ಪುಬಣ್ಣ ಎರಚಿದ್ದಾರೆ ಎಂದು ಹೇಳಿದ್ದಾರೆ.