ಸುದ್ದಿ, ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತಾಡುವವರನ್ನು ಪ್ರಸಾರ ಮಸೂದೆಯ ನೂತನ ಕರಡಿನಲ್ಲಿ ‘ಪ್ರಸಾರಕರಾಗಿ’ ವರ್ಗೀಕರಣ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಪ್ರಸಾರ ಮಸೂದೆಯ ಇತ್ತೀಚಿನ ಎರಡನೇ ಮಸೂದೆಯ ಪ್ರಕಾರ ಆನ್‌ಲೈನ್‌ನಲ್ಲಿ ನಿಯಮಿತವಾಗಿ ವೀಡಿಯೊಗಳನ್ನು ಪೋಸ್ಟ್ ಮಾಡುವವರು, ಸುದ್ದಿ ಅಥವಾ ಪ್ರಚಲಿತ ವಿದ್ಯಮಾನಗಳ ಕುರಿತು ಪಾಡ್‌ಕಾಸ್ಟ್‌ಗಳನ್ನು ಮಾಡುವವರು ಅಥವಾ ಬರೆಯುವವರನ್ನು ‘ಡಿಜಿಟಲ್ ಸುದ್ದಿ ಪ್ರಸಾರಕರು (ಬ್ರಾಡ್ ಕಾಸ್ಟರ್)’ ಎಂದು ವರ್ಗೀಕರಿಸಬಹುದು ಎಂದು Hindustan Times ವರದಿ ಮಾಡಿದೆ.
ಪ್ರಸಾರ ಸೇವೆಗಳ (ನಿಯಂತ್ರಣ) ಮಸೂದೆ,2024ರ ಹೊಸ ಕರಡು ವಿಷಯ ರಚನೆಕಾರರನ್ನು ತನ್ನ ವ್ಯಾಪ್ತಿಯಲ್ಲಿ ತರುವ ಪ್ರಸ್ತಾವದ ಜೊತೆಗೆ, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಕಾರ್ಯಕ್ರಮಗಳನ್ನು ನೇರವಾಗಿ ಅಥವಾ ಪ್ರಸಾರ ಜಾಲವನ್ನು ಬಳಸಿ ಪ್ರಸಾರಿಸಲಾದ ಶ್ರಾವ್ಯ, ದೃಶ್ಯ ಅಥವಾ ಶ್ರಾವ್ಯ-ದೃಶ್ಯ ವಿಷಯ, ಚಿಹ್ನೆ, ಸಂಕೇತಗಳು, ಬರಹಗಳು,ಚಿತ್ರಗಳ ಜೊತೆಗೆ ‘ಟೆಕ್ಸ್ಟ್ ಗಳನ್ನು’ ಒಳಗೊಂಡಿರುತ್ತವೆ ಎಂದು ವ್ಯಾಖ್ಯಾನಿಸಿದೆ.
‘ಕಾರ್ಯಕ್ರಮ’ ಮತ್ತು ‘ಪ್ರಸಾರ’ದ ಪರಿಷ್ಕೃತ ವ್ಯಾಖ್ಯಾನಗಳು ಅನುಕ್ರಮವಾಗಿ ‘ಟೆಕ್ಸ್ಟ್‌ಗಳು’ಮತ್ತು ‘ಟೆಕ್ಸ್ಟ್ ಕಾರ್ಯಕ್ರಮಗಳನ್ನು’ ಸಹ ಒಳಗೊಂಡಿವೆ. ಹೀಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ವೀಡಿಯೊಗಳು, ಕಮೆಂಟರಿ, ವೆಬ್‌ಸೈಟ್‌ಗಳು, ಸುದ್ದಿಪತ್ರಗಳು ಮತ್ತು ಪಾಡಕಾಸ್ಟ್‌ಗಳು ಸೇರಿದಂತೆ ಎಲ್ಲ ಸುದ್ದಿ ಮತ್ತು ಸುದ್ದಿ ಸಂಬಂಧಿತ ವಿಷಯಗಳು ಮಸೂದೆಯ ವ್ಯಾಪ್ತಿಯಲ್ಲಿರಲಿವೆ.
ಕಳೆದ ವರ್ಷದ ನವಂಬರ್‌ನಲ್ಲಿ ಮೊದಲ ಬಾರಿಗೆ ಪರಿಚಯಿಸಲಾದ ಪ್ರಸಾರ ಮಸೂದೆಯು 1995ರ ಕೇಬಲ್ ಟೆಲಿವಿಷನ್ ನೆಟ್‌ವರ್ಕ್ಸ್ ಕಾಯ್ದೆಯ ಬದಲಿಗೆ ಅನುಷ್ಠಾನಗೊಳ್ಳುವ ಸಾಧ್ಯತೆಯಿದೆ. ಸುದ್ದಿ ಮಾಧ್ಯಮಗಳನ್ನು ನಿಯಂತ್ರಿಸಲು ಸರಕಾರಕ್ಕೆ ‘ಅತಿಯಾದ ಅಧಿಕಾರ’ವನ್ನು ನೀಡಲು ಪ್ರಸ್ತಾವಿಸಿದ್ದಕ್ಕಾಗಿ ಈ ಮಸೂದೆಯು ನಿಗಾದಡಿಯಿದೆ.