×
Ad

ಸುಮಾರು 90 ವರ್ಷಗಳ ನಂತರ ಅಸ್ಸಾಂ ವಿಧಾನಸಭೆಯಲ್ಲಿ ನಮಾಝ್ ವಿರಾಮ ರದ್ದು

Update: 2025-02-22 15:10 IST

ಹಿಮಂತ ಬಿಸ್ವಾ ಶರ್ಮ (PTI)

ಗುವಾಹಟಿ: ಶುಕ್ರವಾರದಂದು ಮುಸ್ಲಿಂ ಶಾಸಕರಿಗೆ ನಮಾಝ್ ಗೆ ಅವಕಾಶ ಕಲ್ಪಿಸಲು ಎರಡು ಗಂಟೆಗಳ ಕಾಲ ವಿರಾಮ ನೀಡುತ್ತಿದ್ದ ದಶಕಗಳ ಅಸ್ಸಾಂ ವಿಧಾನಸಭೆ ಪರಂಪರೆ ಅಂತ್ಯಗೊಂಡಿದ್ದು, ಅಸ್ಸಾಂ ವಿಧಾನಸಭೆಯಲ್ಲಿ ಜರುಗುತ್ತಿರುವ ಬಜೆಟ್ ಅಧಿವೇಶನದಲ್ಲಿ ಇದೇ ಪ್ರಥಮ ಬಾರಿಗೆ ಈ ಪರಂಪರೆಗೆ ತಿಲಾಂಜಲಿ ನೀಡಲಾಗಿದೆ.

ನಮಾಝ್ ವಿರಾಮವನ್ನು ಅಂತ್ಯಗೊಳಿಸುವ ನಿರ್ಧಾರವನ್ನು ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನಡೆದಿದ್ದ ವಿಧಾನಸಭಾ ಅಧಿವೇಶನದಲ್ಲೇ ಕೈಕೊಳ್ಳಗಲಾಗಿತ್ತಾದರೂ, ಅದನ್ನು ಈ ಬಾರಿಯ ಅಧಿವೇಶನದಲ್ಲಿ ಜಾರಿಗೊಳಿಸಲಾಗಿದೆ.

ಈ ನಿರ್ಧಾರದ ಬಗ್ಗೆ ಎಐಯುಡಿಎಫ್ ಶಾಸಕ ರಫೀಕುಲ್ ಇಸ್ಲಾಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ವಿಧಾನಸಭೆಯಲ್ಲಿ ಸುಮಾರು 30 ಮುಸ್ಲಿಂ ಶಾಸಕರಿದ್ದಾರೆ. ನಾವು ಈ ನಡೆಯ ವಿರುದ್ಧ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದೇವೆ. ಆದರೆ, ಬಿಜೆಪಿಯ ಬಳಿ ಸಂಖ್ಯಾಬಲವಿದ್ದು, ಅದರ ಆಧಾರದಲ್ಲಿ ಅವರು ಈ ನಿರ್ಧಾರವನ್ನು ಹೇರಿದ್ದಾರೆ” ಎಂದು ಕಿಡಿ ಕಾರಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿರೋಧ ಪಕ್ಷಗಳ ನಾಯಕ ದೇಬಬ್ರತ ಸೈಕಿಯ, “ಶುಕ್ರವಾರಗಳಂದು ಮುಸ್ಲಿಂ ಶಾಸಕರು ಹತ್ತಿರದಲ್ಲೇ ನಮಾಝ್ ಸಲ್ಲಿಸಲು ಅವಕಾಶ ಕಲ್ಪಿಸಬಹುದಾಗಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

“ಇಂದು ನನ್ನ ಪಕ್ಷದ ಹಲವು ಸಹೋದ್ಯೋಗಿಗಳು ಹಾಗೂ ಎಐಯುಡಿಎಫ್ ನ ಶಾಸಕರು ನಮಾಝ್ ನಮಾಝ್ ಬಯಸಿದ್ದರಿಂದ, ಅವರೆಲ್ಲ ಪ್ರಮುಖ ಚರ್ಚೆಯೊಂದನ್ನು ತಪ್ಪಿಸಿಕೊಂಡರು. ಇದು ಶುಕ್ರವಾರಗಳಂದು ಮಾತ್ರ ಸಲ್ಲಿಸುವ ವಿಶೇಷ ಪ್ರಾರ್ಥನೆಯಾಗಿರುವುದರಿಂದ, ಹತ್ತಿರದಲ್ಲೇ ನಮಾಝ್ ಮಾಡಲು ಅವಕಾಶ ಕಲ್ಪಿಸಬಹುದಾಗಿದೆ” ಎಂದು ಅವರು ಹೇಳಿದ್ದಾರೆ.

ಸುಮಾರು 90 ವರ್ಷಗಳ ಈ ಪರಂಪರೆಯನ್ನು ನಿಲ್ಲಿಸುವ ನಿರ್ಧಾರವನ್ನು ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಸ್ಪೀಕರ್ ನೇತೃತ್ವದ ನಿಯಮಾವಳಿಗಳ ಸದನ ಸಮಿತಿ ಕೈಗೊಂಡಿತ್ತು.

“ಸಂವಿಧಾನದ ಜಾತ್ಯತೀತ ಸ್ವರೂಪದ ಹಿನ್ನೆಲೆಯಲ್ಲಿ ನಿಯಮಾವಳಿ ಸಮಿತಿ ಎದುರು ಮಂಡಿಸಲಾಗಿದ್ದ ಹಾಗೂ ಸರ್ವಾನುಮತದಿಂದ ಅಂಗೀಕರಿಸಲಾಗಿದ್ದ ನಿರ್ಧಾರದನ್ವಯ, ಅಸ್ಸಾಂ ವಿಧಾನಸಭೆಯು ಬೇರೆ ದಿನಗಳಂತೆ ಶುಕ್ರವಾರದಂದೂ ತನ್ನ ಕಲಾಪಗಳನ್ನು ನಡೆಸಬೇಕು ಎಂದು ಪ್ರಸ್ತಾಪಿಸಲಾಗಿತ್ತು” ಎಂದು ಸ್ಪೀಕರ್ ಬಿಸ್ವಜಿತ್ ದೈಮರಿ ಈ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

ಸದನದ ನಿರ್ಧಾರವನ್ನು ಸ್ವಾಗತಿಸಿರುವ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, ಈ ಪದ್ಧತಿಯನ್ನು 1937ರಲ್ಲಿ ಮುಸ್ಲಿಂ ಲೀಗ್ ನ ಸೈಯದ್ ಸಾದುಲ್ಲಾ ಪರಿಚಯಿಸಿದ್ದರು. ನಮಾಝ್ ವಿರಾಮವನ್ನು ನಿಲ್ಲಿಸುವ ನಿರ್ಧಾರವು ಉತ್ಪಾದಕತೆಯನ್ನು ಆದ್ಯತೆಗೊಳಿಸಲಿದೆ ಹಾಗೂ ಮತ್ತೊಂದು ವಸಾಹತುಶಾಹಿ ಕುರುಹನ್ನು ಮೂಲೆಗುಂಪು ಮಾಡಲಿದೆ” ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News