ಈಗ ಬಿಒಬಿ ಸರದಿ: ‘ವಂಚನೆ’ಪಟ್ಟಿಯಲ್ಲಿ ಆರ್‌ಕಾಮ್, ಅನಿಲ್ ಅಂಬಾನಿ
ಅನಿಲ ಅಂಬಾನಿ | PC : PTI
ಮುಂಬೈ,ಸೆ.5: ಎಸ್‌ಬಿಐ ಮತ್ತು ಬ್ಯಾಂಕ್ ಆಫ್ ಇಂಡಿಯಾದ ಬಳಿಕ ಈಗ ಬ್ಯಾಂಕ್ ಆಫ್ ಬರೋಡಾ(ಬಿಒಬಿ) ರಿಲಯನ್ಸ್ ಕಮ್ಯುನಿಕೇಷನ್ಸ್(ಆರ್‌ಕಾಮ್) ಮತ್ತು ಅದರ ಮಾಜಿ ಪ್ರವರ್ತಕ ಹಾಗೂ ನಿರ್ದೇಶಕ ಅನಿಲ ಅಂಬಾನಿ ಅವರ ಸಾಲಖಾತೆಯನ್ನು ‘ವಂಚನೆ’ ಪಟ್ಟಿಗೆ ಸೇರಿಸಿದೆ.
ಬಿಒಬಿ ಸೆ.2ರಂದು ತನಗೆ ಬರೆದಿರುವ ಪತ್ರವನ್ನು ಆರ್‌ಕಾಮ್ ಶೇರು ವಿನಿಮಯ ಕೇಂದ್ರಗಳಿಗೆ ಬಹಿರಂಗಗೊಳಿಸಿದೆ. ಫಾರೆನ್ಸಿಕ್ ಆಡಿಟ್ ನಲ್ಲಿ ಆರ್‌ಕಾಮ್ ನಡೆಸಿದ ಹಲವಾರು ಅಕ್ರಮಗಳು ಪತ್ತೆಯಾಗಿದ್ದು, ಅವು ಸಾಬೀತಾಗಿವೆ ಎಂದು ಬಿಒಬಿ ಪತ್ರದಲ್ಲಿ ತಿಳಿಸಿದೆ.
ಬಿಒಬಿ ಆರ್‌ಕಾಮ್‌ಗೆ 2,462 ಕೋ.ರೂ.ಮಿತಿಯೊಂದಿಗೆ ಸಾಲವನ್ನು ಮಂಜೂರು ಮಾಡಿದ್ದು, ಆ.28ಕ್ಕೆ ಇದ್ದಂತೆ ಕಂಪನಿಯು 1,656 ಕೋ.ರೂ.ಗಳ ಸಾಲಬಾಕಿಯನ್ನು ಉಳಿಸಿಕೊಂಡಿದೆ. ಆರ್‌ಕಾಮ್ ನ ಸಾಲ ಖಾತೆಯನ್ನು ಜೂನ್ 2017ರಲ್ಲಿ ಅನುತ್ಪಾದಕ ಆಸ್ತಿ(ಎನ್‌ಪಿಎ) ಎಂದು ವರ್ಗೀಕರಿಸಲಾಗಿತ್ತು.
ಸಾಲವನ್ನು ಪಡೆದುಕೊಂಡಿದ್ದ ಉದ್ದೇಶಕ್ಕೆ ವಿರುದ್ಧವಾಗಿ ಹಣದ ವ್ಯವಸ್ಥಿತ ದುರ್ಬಳಕೆ ಸೇರಿದಂತೆ ಹಲವಾರು ಅಕ್ರಮಗಳನ್ನು ಬ್ಯಾಂಕು ಬೆಟ್ಟು ಮಾಡಿದೆ.
ಆರ್ ಕಾಮ್ ಮತ್ತು ಅನಿಲ್ ಅಂಬಾನಿಯವರನ್ನು ‘ವಂಚನೆ’ ಎಂದು ವರ್ಗೀಕರಣದ ಬಗ್ಗೆ ತಾನು ಆರ್‌ಬಿಐಗೆ ವರದಿ ಸಲ್ಲಿಸುವುದಾಗಿ ಬಿಒಬಿ ಹೇಳಿದೆ.
‘ವಂಚನೆ ’ವರ್ಗೀಕರಣಕ್ಕೆ ಪ್ರತಿಕ್ರಿಯಿಸಿರುವ ಆರ್‌ಕಾಮ್, ಬಿಒಬಿ ಪತ್ರದಲ್ಲಿ ಉಲ್ಲೇಖಿಸಿರುವ ಸಾಲ ಸೌಲಭ್ಯಗಳು ತಾನು ದಿವಾಳಿತನ ಪ್ರಕ್ರಿಯೆಗೆ ಒಳಗಾಗುವ ಮೊದಲಿನ ಅವಧಿಗೆ ಸಂಬಂಧಿಸಿವೆ.
ಕಂಪೆನಿಯ ಪರಿಹಾರ ಯೋಜನೆಗೆ ಅನುಮೋದನೆ ದೊರಕಿದ್ದು, ರಾಷ್ಟ್ರಿಯ ಕಂಪೆನಿ ಕಾನೂನು ನ್ಯಾಯಾಧಿಕರಣದ ಅನುಮತಿಗಾಗಿ ಕಾಯಲಾಗುತ್ತಿದೆ ಎಂದು ಹೇಳಿದೆ.