ನರ್ಸಿಂಗ್ ಸಿಬ್ಬಂದಿಯಿಂದ ಐಸಿಯುನಲ್ಲೇ ರೋಗಿಯ ಮೇಲೆ ಅತ್ಯಾಚಾರ
ಅಲ್ವಾರ್:ಇಲ್ಲಿನ ಇಎಸ್‍ಐಸಿ ವೈದ್ಯಕೀಯ ಕಾಲೇಜಿನ ಸರ್ಜಿಕಲ್ ಮೆಡಿಕಲ್ ಐಸಿಯುನಲ್ಲಿ ನರ್ಸಿಂಗ್ ಸಿಬ್ಬಂದಿ 32 ವರ್ಷದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಘಟನೆ ಬಗ್ಗೆ ಆಸ್ಪತ್ರೆ ಮಟ್ಟದ ತನಿಖೆ ಮತ್ತು ಪೊಲೀಸ್ ಕ್ರಮ ಕೈಗೊಳ್ಳಲಾಗಿದೆ.
ಆರೋಪಿ ಸುಭಾಷ್ ಘೀತಾಳಾ ಆಸ್ಪತ್ರೆಗೆ ಪ್ರವೇಶಿಸದಂತೆ ನಿರ್ಬಂಧ ವಿಧಿಸಲಾಗಿದೆ. ಘಟನೆ ಹಿನ್ನೆಲೆಯಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಮತ್ತು ಸಿಬ್ಬಂದಿಗೆ ನೋಟಿಸ್ ನೀಡಲಾಗಿದ್ದು, ಅವರ ಲಿಖಿತ ಪ್ರತಿಕ್ರಿಯೆಗೆ ಸೂಚಿಸಲಾಗಿದೆ. ಘಟನೆ ಬಗ್ಗೆ ಸಮಗ್ರ ತನಿಖೆ ನಡೆಸಲು ಸಮಿತಿ ರಚಿಸಲಾಗಿದ್ದು, ಶನಿವಾರ ಸಂಜೆ ವೇಳೆಗೆ ವರದಿ ಸಲ್ಲಿಸುವ ನಿರೀಕ್ಷೆ ಇದೆ.
ಮಹಿಳೆ ಜೂನ್ 2ರಂದು ಟ್ಯುಬೆಕ್ಟಮಿ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 4ರಂದು ಶಸ್ತ್ರಚಿಕಿತ್ಸೆ ನಡೆಸಿದ ಬಳಿಕ ಐಸಿಯುಗೆ ಸ್ಥಳಾಂತರಿಸಲಾಗಿತ್ತು. ರಾತ್ರಿ 11 ಗಂಟೆಯ ಸುಮಾರಿಗೆ ಹೊರಗೆ ಕಾಯುವಂತೆ ಭದ್ರತಾ ಸಿಬ್ಬಂದಿ ಮಹಿಳೆಯ ಪತಿಗೆ ಸೂಚಿಸಿದ್ದರು. ಮಧ್ಯರಾತ್ರಿ ಬಳಿಕ 1.30 ರಿಂದ 2.30ರ ನಡುವೆ ಪತ್ನಿ ಚುಚ್ಚುಮದ್ದಿನ ಅಡ್ಡ ಪರಿಣಾಮ ಅನುಭವಿಸುತ್ತಿರುವುದಾಗಿ ನರ್ಸಿಂಗ್ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಮಾಹಿತಿ ನೀಡಿ ಒಳಕ್ಕೆ ಬರುವಂತೆ ಸೂಚಿಸಿದ್ದರು. ಪತ್ನಿಯನ್ನು ಮಲಗಿಸಿದ ಬಳಿಕ ಹೊರಹೋಗುವಂತೆ ಪತಿಗೆ ಸೂಚಿಸಲಾಯಿತು ಎಂದು ಪೊಲೀಸರು ವಿವರಿಸಿದ್ದಾರೆ.
ಜೂನ್ 5ರಂದು ಪತ್ನಿ ಪ್ರಜ್ಞೆ ಪಡೆದಿದ್ದು, ಹಿಂದಿನ ರಾತ್ರಿ ನರ್ಸಿಂಗ್ ಸಿಬ್ಬಂದಿ ತೆರೆ ಸರಿಸಿ ಲೈಂಗಿಕ ಹಲ್ಲೆ ನಡೆಸಿದ್ದಾಗಿ ಪತಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ ಎಫ್‍ಐಆರ್ ದಾಖಲಿಸಲಾಗಿದೆ. ಮರುದಿನ ಮಹಿಳೆ ಈ ವಿಷಯವನ್ನು ವೈದ್ಯೆ ಡಾ. ದೀಪಿಕಾ ಅವರಿಗೆ ತಿಳಿಸಿದ್ದು, ಸಾಕ್ಷಿಗಳ ಸಮ್ಮುಖದಲ್ಲೇ ಆರೋಪಿಗೆ ಛೀಮಾರಿ ಹಾಕಿದ್ದಾರೆ. ಆರೋಪಿ ತಪ್ಪೊಪ್ಪಿಕೊಂಡಿದ್ದಾಗಿ ಆಸ್ಪತ್ರೆ ಸ್ಪಷ್ಟಪಡಿಸಿದೆ. ಆರೋಪಿ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣ ದಾಖಲಿಸಿದ್ದಾಗಿ ಎಚ್‍ಎಚ್‍ಓ ಅಜಿತ್ ಬಡಸಾರಾ ವಿವರಿಸಿದ್ದಾರೆ.