ಒಡಿಶಾ: ಪಾದ್ರಿಗಳ ಮೇಲೆ ಗುಂಪಿನಿಂದ ದಾಳಿ
ಕ್ರೈಸ್ತರ ವಿರುದ್ಧದ ಹಿಂಸಾಚಾರಕ್ಕೆ ಬಿಷಪ್ ಖಂಡನೆ
PC ; thewire.in
ಭುವನೇಶ್ವರ, ಆ. 9: ಒಡಿಶಾದ ಜಲೇಶ್ವರನಲ್ಲಿ ಈ ವಾರದ ಆರಂಭದಲ್ಲಿ ಇಬ್ಬರು ಕೆಥೋಲಿಕ್ ಪಾದ್ರಿಗಳು, ಇಬ್ಬರು ನನ್‌ಗಳು ಹಾಗೂ ಓರ್ವ ಧರ್ಮೋಪದೇಶಕನ ಮೇಲೆ ಗುಂಪೊಂದು ದಾಳಿ ನಡೆಸಿರುವುದನ್ನು ‘ದಿ ಕೆಥೋಲಿಕ್ ಬಿಷಪ್ಸ್ ಕಾನ್ಫರೆನ್ಸ್ ಆಫ್ ಇಂಡಿಯಾ’ ಶುಕ್ರವಾರ ಖಂಡಿಸಿದೆ.
ಈ ಘಟನೆ ಪ್ರತ್ಯೇಕ ಪ್ರಕರಣವಲ್ಲ. ಬದಲಾಗಿ ದೇಶದಲ್ಲಿ ಅಲ್ಪಸಂಖ್ಯಾತ ಕ್ರೈಸ್ತರ ವಿರುದ್ಧದ ಹಿಂಸಾಚಾರದ ಅಪಾಯಕಾರಿ ಮಾದರಿಯ ಭಾಗವಾಗಿದೆ ಎಂದು ಸಂಘಟನೆ ಹೇಳಿದೆ.
ಈ ಗುಂಪು ದಾಳಿ ಸಂವಿಧಾನಿಕ ಹಕ್ಕು ಹಾಗೂ ಮಾನವ ಘನತೆಯ ಸ್ಪಷ್ಟ ಉಲ್ಲಂಘನೆ ಎಂದು ಸಂಘಟನೆ ಹೇಳಿದೆ. ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಹಿಂಸಾಚಾರದ ಮಾದರಿಯು ಶಾಂತಿಯುತ ಸಹಬಾಳ್ವೆಗೆ ಅಪಾಯವನ್ನುಂಟು ಮಾಡುತ್ತದೆ ಎಂದು ಅದು ಎಚ್ಚರಿಸಿದೆ.
ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಹಾಗೂ ಅಲ್ಪಸಂಖ್ಯಾತ ಸಮುದಾಯಕ್ಕೆ ರಕ್ಷಣೆ ನೀಡುವಂತೆ ಅದು ಒಡಿಶಾ ಸರಕಾರವನ್ನು ಆಗ್ರಹಿಸಿದೆ.
ಈ ಘಟನೆ ಬುಧವಾರ ನಡೆದಿದೆ. ಕಾನೂನುಬಾಹಿರವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿ ಫಾದರ್ ಲಿಜೋ ಪಾಲಕ್ಕರನ್, ಫಾದರ್ ಜಿಜೋ, ಇಬ್ಬರು ನನ್‌ಗಳು ಹಾಗೂ ಧರ್ಮಬೋಧಕ ದುರ್ಜ್ಯೋಧನ ಮೇಲೆ ಸುಮಾರು 70 ಜನರಿದ್ದ ಗುಂಪು ದಾಳಿ ನಡೆಸಿತು ಎಂದು ಆರ್ಕ್ ಬಿಷಪ್ ಮಾರ್ ಆ್ಯಂಡ್ರೀವ್ಸ್ ಥಝಹತ್ ಹೇಳಿದ್ದಾರೆ.
ಸಮೀಪದ ಗ್ರಾಮದಲ್ಲಿ ವಿಶೇಷ ಪ್ರಾರ್ಥನೆಯಿಂದ ಐವರು ಹಿಂದಿರುಗುತ್ತಿದ್ದಾಗ ಮೋಟಾರು ಸೈಕಲ್ ಚಲಾಯಿಸುತ್ತಿದ್ದ ಧರ್ಮೋಪದೇಶಕರನ್ನು ಗುಂಪು ತಡೆದು ನಿಲ್ಲಿಸಿತು ಹಾಗೂ ನಿಂದಿಸಿತು.
‘‘ಗುಂಪು ಅವರ ಸೆಲ್ ಫೋನ್ ಅನ್ನು ಕಿತ್ತುಕೊಂಡಿತು. ಬೈಕ್ ಟಯರ್‌ನ ಗಾಳಿ ತೆಗೆಯಿತು. ಅಂಗಿಯನ್ನು ಹರಿಯಿತು ಹಾಗೂ ಅವಾಚ್ಯ ಶಬ್ದಗಳಿಂದ ನಿಂದಿಸಿತು’’ ಎಂದು ಕೆಥೋಲಿಕ್ ಗುಂಪಿನ ಅಧ್ಯಕ್ಷರೂ ಆಗಿರುವ ಥಝಹತ್ ತಿಳಿಸಿದ್ದಾರೆ.
ಪಾದ್ರಿಗಳು ಹಾಗೂ ನನ್‌ಗಳನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ಕೂಡ ಗುಂಪು ತಡೆ ಒಡ್ಡಿತು. ಪಾದ್ರಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿತು ಎಂದು ಅವರು ಹೇಳಿದ್ದಾರೆ.
ಈ ಗುಂಪು ಬಜರಂಗದಳದ ಸದಸ್ಯರನ್ನು ಒಳಗೊಂಡಿತ್ತು ಎಂದು ‘ದಿ ಸೌತ್ ಫಸ್ಟ್’ ವರದಿ ಮಾಡಿದೆ.