×
Ad

ತಳ ಅಂತಸ್ತಿನಲ್ಲೇ ಲೈಬ್ರರಿ ಇರುವ ಬಗ್ಗೆ ತಿಂಗಳ ಮೊದಲೇ ದೂರು ದಾಖಲಾಗಿದ್ದರೂ ಯಾವುದೇ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳು: ವರದಿ

Update: 2024-07-29 21:07 IST

ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ದಿಲ್ಲಿಯ ರಾಜಿಂದರ್ ನಗರದಲ್ಲಿರುವ ರಾವ್ಸ್ ಐಎಎಸ್ ಸ್ಟಡಿ ಸರ್ಕಲ್‌ನ ತಳ ಮಹಡಿಯನ್ನು ವಾಚನಾಲಯವಾಗಿ ಬಳಸುತ್ತಿರುವ ಬಗ್ಗೆ ಜೂನ್ 26ರಂದು ಸಾರ್ವಜನಿಕ ದೂರುಗಳ ವೆಬ್‌ಸೈಟ್‌ನಲ್ಲಿ ದೂರೊಂದು ದಾಖಲಾಗಿತ್ತು ಎನ್ನುವ ಅಂಶ ಹೊರಬಿದ್ದಿದೆ. ಶನಿವಾರ ಸಂಸ್ಥೆಯ ತಳಮಹಡಿಗೆ ನೀರು ನುಗ್ಗಿ ಸಂಭವಿಸಿದ ದುರಂತದಲ್ಲಿ ಮೂವರು ಐಎಎಸ್ ಆಕಾಂಕ್ಷಿಗಳು ಮೃತಪಟ್ಟಿದ್ದಾರೆ.

ಐಎಎಸ್ ಆಕಾಂಕ್ಷಿ ಕಿಶೋರ್ ಸಿಂಗ್ ಕುಶ್ವಾಹ ಕೇಂದ್ರ ಸರಕಾರ, ರಾಜ್ಯ ಸರಕಾರ ಮತ್ತು ದಿಲ್ಲಿ ಮುನಿಸಿಪಾಲಿಟಿ ಅಧಿಕಾರಿಗಳಿಗೆ ದೂರು ಸಲ್ಲಿಸದ್ದರು. ‘ಆಕ್ಷೇಪವಿಲ್ಲ’ ಪ್ರಮಾಣಪತ್ರವಿಲ್ಲದೆ ತಳ ಮಹಡಿಯನ್ನು ವಾಚನಾಲಯವಾಗಿ ಬಳಸಲಾಗುತ್ತಿದೆ ಎಂದು ಅವರು ದೂರಿದ್ದರು.

ತಳಮಹಡಿಯಲ್ಲಿ ವಾಹನಗಳ ನಿಲುಗಡೆಗೆ ಮತ್ತು ವಸ್ತುಗಳ ದಾಸ್ತಾನಿಗೆ ದಿಲ್ಲಿ ಮುನಿಸಿಪಾಲಿಟಿಯು ಅನುಮೋದನೆ ನೀಡಿತ್ತು.

‘‘ಅನಮೋದನೆ ಇಲ್ಲದಿದ್ದರೂ ಅವರು ತಳ ಮಹಡಿಯಲ್ಲಿ ತರಗತಿಗಳನ್ನು ನಡೆಸುತ್ತಿದ್ದಾರೆ. ಅವರು ಪರೀಕ್ಷಾ ತರಗತಿಗಳನ್ನು ನಡೆಸುತ್ತಿದ್ದಾರೆ. ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಪ್ರಾಣಗಳಿಗೆ ಬೆದರಿಕೆಯೊಡ್ಡಿದೆ. ಇಲ್ಲಿ ಗಂಭೀರ ಅಪಘಾತ ಸಂಭವಿಸುವ ಸಾಧ್ಯತೆಯಿದೆ’’ ಎಂದು ಅವರು ತನ್ನ ದೂರಿನಲ್ಲಿ ಎಚ್ಚರಿಸಿದ್ದರು.

ಅದೂ ಅಲ್ಲದೆ, ಎರಡು ವಾರಗಳ ಹಿಂದೆ, ಅಂದರೆ ಜುಲೈ 15ರಂದು ಮತ್ತು ಒಂದು ವಾರದ ಬಳಿಕ ಜುಲೈ 22ರಂದು ಜ್ಞಾಪನಾ ಪತ್ರಗಳನ್ನೂ ಬರೆದಿದ್ದರು.

‘‘ಈ ದುರ್ಘಟನೆಗೆ ಆಡಳಿತವೇ ಸಂಪೂರ್ಣ ಜವಾಬ್ದಾರಿಯಾಗಿದೆ. ಸರಕಾರವು ಇಂಥ ಸಂಸ್ಥೆಗಳ ವಿರುದ್ಧ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಬೇಕು’’ ಎಂದು ಕಿಶೋರ್ ಸಿಂಗ್ ಹೇಳಿದ್ದಾರೆ.

ಇನ್ನೂ ಐವರ ಬಂಧನ:

ನಾಗರಿಕ ಸೇವಾ ಪರೀಕ್ಷೆಗಳಿಗೆ ಹಾಜರಾಗಲು ತರಬೇತಿ ಪಡೆಯುತ್ತಿದ್ದ ಮೂವರು ಪ್ರವಾಹದಲ್ಲಿ ಮೃತಪಟ್ಟ ಘಟನೆಗೆ ಸಂಬಂಧಿಸಿ ದಿಲ್ಲಿ ಪೊಲೀಸರು ಇನ್ನೂ ಐವರನ್ನು ಬಂಧಿಸಿದ್ದಾರೆ. ನೀರಿನಿಂದಾವೃತ ರಸ್ತೆಯಲ್ಲಿ ವಾಹನ ಚಲಾಯಿಸಿ ರಾವ್ ಸಿವಿಲ್ ಸರ್ವಿಸ್ ಕೋಚಿಂಗ್ ಇನ್‌ಸ್ಟಿಟ್ಯೂಟ್‌ನ ದ್ವಾರಕ್ಕೆ ಹಾನಿ ಮಾಡಿದ ವಾಹನವೊಂದರ ಚಾಲಕನೂ ಬಂಧಿತರಲ್ಲಿ ಸೇರಿದ್ದಾರೆ.

ದುರಂತಕ್ಕೆ ಸಂಬಂಧಿಸಿ ಪೊಲೀಸರು ರವಿವಾರ ಸಂಸ್ಥೆಯ ಮಾಲೀಕ ಮತ್ತು ಸಮನ್ವಯಕಾರನನ್ನು ಬಂಧಿಸಿದ್ದರು. ಇದರೊಂದಿಗೆ ಬಂಧಿತರ ಸಂಖ್ಯೆ ಏಳಕ್ಕೆ ಏರಿದೆ.

ಶನಿವಾರ ಭಾರೀ ಮಳೆಯ ಹಿನ್ನೆಲೆಯಲ್ಲಿ, ಮಧ್ಯ ದಿಲ್ಲಿಯಲ್ಲಿರುವ ಕೋಚಿಂಗ್ ಸಂಸ್ಥೆಯ ತಳ ಮಹಡಿಗೆ ನೀರು ನುಗ್ಗಿದಾಗ ಅದರಲ್ಲಿದ್ದ ಮೂವರು ಯುವ ಐಎಎಸ್ ಆಕಾಂಕ್ಷಿಗಳು ಪ್ರಾಣ ಕಳೆದುಕೊಂಡಿದ್ದಾರೆ.

ಕೋಚಿಂಗ್ ಸಂಸ್ಥೆಯು ತಳಮಹಡಿಯಲ್ಲಿ ‘‘ಕಾನೂನುಬಾಹಿರವಾಗಿ’’ ವಾಚನಾಲಯವೊಂದನ್ನು ನಡೆಸುತ್ತಿತ್ತು ಎಂಬುದಾಗಿ ಆರಂಭಿಕ ಪೊಲೀಸ್ ತನಿಖೆಯೊಂದು ತಿಳಿಸಿದೆ.

ರಸ್ತೆಯು ಜಲಾವೃತವಾಗಿದ್ದಾಗ ದೊಡ್ಡ ಕಾರೊಂದು ಬಲವಾದ ಅಲೆಗಳನ್ನು ಎಬ್ಬಿಸುತ್ತಾ ಕೋಚಿಂಗ್ ಸಂಸ್ಥೆಯ ಎದುರಿನಿಂದ ಹಾದು ಹೋಯಿತು ಹಾಗೂ ಆ ಕಾರು ಸಂಸ್ಥೆಯ ದ್ವಾರಕ್ಕೆ ಢಿಕ್ಕಿಯಾಗಿರುವಂತೆ ಕಂಡುಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ದೊಡ್ಡ ಅಲೆಗಳನ್ನು ಎಬ್ಬಿಸುತ್ತಾ ಸಾಗಿದ ಕಾರು, ಕೋಚಿಂಗ್ ಸಂಸ್ಥೆಯ ಒಳಗೆ ನೀರು ನುಗ್ಗಲು ಕಾರಣವಾದ ಅಂಶಗಳಲ್ಲಿ ಒಂದಾಗಿದೆ ಎನ್ನಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News