×
Ad

ರಾಜಸ್ಥಾನ | ಪೊಲೀಸರ ಭಯಾನಕ ಕಾರ್ಯಾಚರಣೆಗೆ ಒಂದು ತಿಂಗಳ ಮಗು ಮೃತ್ಯು

Update: 2025-03-05 23:01 IST

Photo : The Hindu

ಜೈಪುರ : ರಾಜಸ್ಥಾನದ ಆಲ್ವಾರ್‌ನಲ್ಲಿ ಪೊಲೀಸ್ ದಾಳಿಯ ವೇಳೆ ಒಂದು ತಿಂಗಳ ಮಗು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಪೊಲೀಸ್ ಸಿಬ್ಬಂದಿ ವಿರುದ್ಧ ತಕ್ಷಣ ಕೊಲೆ ಆರೋಪದ ಪ್ರಕರಣ ದಾಖಲಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಆಗ್ರಹಿಸಿದ್ದಾರೆ.

ಮಂಗಳವಾರ ಸಂತ್ರಸ್ತೆಯ ಕುಟುಂಬವನ್ನು ಅವರು ಭೇಟಿ ಮಾಡಿದರು. ರವಿವಾರ ಬೆಳಿಗ್ಗೆ 6 ಗಂಟೆಗೆ ನೌಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ರಘುನಾಥ್‌ಗಢ ಗ್ರಾಮದಲ್ಲಿರುವ ಇಮ್ರಾನ್ ಖಾನ್ ಅವರ ಮನೆಯ ಮೇಲೆ ಪೊಲೀಸರು ನಡೆಸಿದ ಭಯಾನಕ ದಾಳಿಗೆ ಮಗು ಮೃತಪಟ್ಟಿದೆ ಎನ್ನಲಾಗಿದೆ.

ಮಗುವಿನೊಂದಿಗೆ ತಾಯಿ ಮಲಗಿದ್ದಾಗ, ಯಾವುದೇ ಮಹಿಳಾ ಕಾನ್‌ಸ್ಟೆಬಲ್‌ಗಳಿಲ್ಲದೆ ಪೊಲೀಸರು ಮನೆಗೆ ನುಗ್ಗಿದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ಪೊಲೀಸರು ಹಾಸಿಗೆಯ ಮೇಲೆ ಒಂದೇ ಸಮನೆ ಹಾರಿದಾಗ, ತಾಯಿಯ ಪಕ್ಕದಲ್ಲಿ ಮಲಗಿದ್ದ ನವಜಾತ ಶಿಶು ಅಲಿಷ್ದಾಗೆ ಮಾರಣಾಂತಿಕ ಗಾಯಗಳಾಯಿತು ಎನ್ನಲಾಗಿದೆ.

ಪೊಲೀಸರು ವಾರಂಟ್ ಇಲ್ಲದೇ ದಾಳಿ ಮಾಡಿದ್ದಾರೆ. ಅವರ ದಾಳಿಗೆ ಗುರಿಯಾಗಿದ್ದ ದಿನಗೂಲಿ ಕಾರ್ಮಿಕ ಇಮ್ರಾನ್ ಖಾನ್ ಮೇಲೆ ಯಾವುದೇ ಕ್ರಿಮಿನಲ್ ಆರೋಪವಿಲ್ಲ. ಈ ಭಯಾನಕ ಕೃತ್ಯವು ಬಡ ಮತ್ತು ಅಂಚಿನಲ್ಲಿರುವ ಕುಟುಂಬಗಳ ದುರ್ಬಲತೆಯನ್ನು ಎತ್ತಿ ತೋರಿಸುತ್ತದೆ. ಇದು ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವು ಮುಂದುವರಿರುವ ಮುಸ್ಲಿಂ ವಿರೋಧಿ ನೀತಿಯಿಂದ ಸಂಭವಿಸಿದೆ ಎಂದು ಸಿಪಿಐ(ಎಂ) ನಾಯಕರೊಂದಿಗೆ ಮಂಗಳವಾರ ಮಗುವಿನ ಕುಟುಂಬವನ್ನು ಭೇಟಿ ಮಾಡಿದ ಬೃಂದಾ ಕಾರಟ್ ಹೇಳಿದ್ದಾರೆ.

ದಾಳಿಯಲ್ಲಿ ಭಾಗಿಯಾಗಿರುವ ಎಲ್ಲಾ ಪೊಲೀಸ್ ಸಿಬ್ಬಂದಿಯನ್ನು ಕೊಲೆ ಆರೋಪದ ಮೇಲೆ ಬಂಧಿಸಬೇಕು. ಪೊಲೀಸ್ ಠಾಣೆಯ ಉಸ್ತುವಾರಿಯನ್ನು ಅಮಾನತುಗೊಳಿಸಬೇಕು. ಮೃತ ಮಗುವಿನ ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಸಿಪಿಐ(ಎಂ) ಒತ್ತಾಯಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News