×
Ad

ಉತ್ತರಾಖಂಡ | ವೈದ್ಯಕೀಯ ನಿರ್ಲಕ್ಷ್ಯ: ನಿವೃತ್ತ ಸೇನಾಧಿಕಾರಿಯ ಒಂದು ವರ್ಷದ ಹಸುಗೂಸು ಮೃತ್ಯು

Update: 2025-08-01 18:31 IST
PC : X 

ಡೆಹ್ರಾಡೂನ್: ಉತ್ತರಾಖಂಡದಲ್ಲಿ ನಿರ್ಜಲೀಕರಣಕ್ಕೆ ತುತ್ತಾಗಿದ್ದ ಒಂದು ವರ್ಷದ ಮಗುವೊಂದು ವೈದ್ಯಕೀಯ ನಿರ್ಲಕ್ಷ್ಯದಿಂದ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ಮೃತ ಮಗುವನ್ನು ಶಿವಾಂಶ್ ಜೋಶಿ ಎಂದು ಗುರುತಿಸಲಾಗಿದೆ.

ಮೃತ ಮಗುವನ್ನು ನಾಲ್ಕು ಜಿಲ್ಲೆಗಳ ಐದು ಆಸ್ಪತ್ರೆಗಳಿಗೆ ಕರೆದೊಯ್ದರೂ ಜೀವಂತವಾಗುಳಿದಿಲ್ಲ ಎಂದು ವರದಿಯಾಗಿದೆ. ಮೃತ ಮಗುವು ನಿವೃತ್ತ ಸೇನಾಧಿಕಾರಿ ದಿನೇಶ್ ಚಂದ್ರ ಜೋಶಿ ಎಂಬುವವರ ಪುತ್ರನಾಗಿದ್ದು, ಅಸಮರ್ಪಕ ಸೇವೆ, ವೈದ್ಯಕೀಯ ಆರೈಕೆಯ ಕೊರತೆ ಹಾಗೂ ವೈದ್ಯಕೀಯ ಸಿಬ್ಬಂದಿಗಳ ನಿರ್ಲಕ್ಷ್ಯದಿಂದಾಗಿ ಮೃತಪಟ್ಟಿದೆ ಎಂದು ಆರೋಪಿಸಲಾಗಿದೆ.

ಜುಲೈ 10ರಿಂದ ಮೃತ ಮಗುವಿಗೆ ವಾಂತಿಯೊಂದಿಗೆ ನಿರ್ಜಲೀಕರಣದ ರೋಗ ಲಕ್ಷಣಗಳನ್ನು ಕಂಡುಬಂದಿತ್ತು. ಆ ಮಗುವಿಗೆ ಮೊಲೆ ಹಾಲೂಡಿಸಲು ಸಾಧ್ಯವಾಗದೆ ಇದ್ದುದರಿಂದ, ಆತನನ್ನು ಮಧ್ಯಾಹ್ನ ಸುಮಾರು 1.50ರ ವೇಳೆಗೆ ಚಮೋಲಿಯ ಗ್ವಾಲ್ದಮ್ ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಅಲ್ಲಿಂದ ಮಗುವನ್ನು ಸುಮಾರು 22 ಕಿಮೀ ದೂರವಿರುವ ಬಾಗೇಶ್ವರದ ಬೈಜನಾಥ್ ನಲ್ಲಿನ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಆದರೆ, ಈ ಸಾರ್ವಜನಿಕ ಆರೋಗ್ಯ ಕೇಂದ್ರದಲ್ಲಿ ಯಾವುದೇ ಮಕ್ಕಳ ತಜ್ಞರು ಅಥವಾ ಮಗುವಿಗೆ ಆರೈಕೆ ಮಾಡಲು ಬೇಕಾಗುವಂತಹ ಸೌಲಭ್ಯಗಳು ಇರಲಿಲ್ಲ ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಓರ್ವ ಆಸ್ಪತ್ರೆ ಸಿಬ್ಬಂದಿ, “ಮಗುವನ್ನು ನೋಡಿಕೊಳ್ಳಲು ನಮ್ಮಲ್ಲಿ ಮಕ್ಕಳ ತಜ್ಞರಿಲ್ಲ. ಸಾಮುದಾಯಿಕ ಆರೋಗ್ಯ ಕೇಂದ್ರದಲ್ಲಿ ಅಲ್ಟ್ರಾಸೌಂಡ್ ಸೌಲಭ್ಯ ಮಾತ್ರವಿದ್ದು, ಅಲ್ಲಿ ಮಗುವಿಗೆ ಪ್ರಥಮ ಚಿಕಿತ್ಸೆಯನ್ನು ನೀಡಲಾಯಿತು” ಎಂದು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಬಳಿಕ, ಅಲ್ಲಿಂದ ಬೈದ್ಯನಾಥ್ ನಲ್ಲಿರುವ ಸಾಮುದಾಯಿಕ ಆರೋಗ್ಯ ಕೇಂದ್ರಕ್ಕೆ ಮಗುವನ್ನು ಕರೆದೊಯ್ಯಲಾಗಿದ್ದು, ಅಲ್ಲಿ ಮಗುವಿಗೆ ಚಿಕಿತ್ಸೆ ನೀಡಲಾಗಿದೆ. ಆದರೆ, ಅಲ್ಲಿ ಮಗುವಿನ ಆರೋಗ್ಯ ಸ್ಥಿತಿ ವಿಷಮಿಸಿದ್ದರಿಂದ, ಮತ್ತೆ ಸುಮಾರು 20 ಕಿಮೀ ದೂರವಿರುವ ಬಾಗೇಶ್ವರ್ ನಲ್ಲಿರುವ ಜಿಲ್ಲಾಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

ಮೃತ ಮಗುವಿನ ತಂದೆಯ ಪ್ರಕಾರ, ಕರ್ತವ್ಯನಿರತ ವೈದ್ಯರು ತಮ್ಮ ಮೊಬೈಲ್ ಫೋನ್ ನಲ್ಲಿ ನಿರತರಾಗಿದ್ದರೆ, ಕರ್ತವ್ಯನಿರತ ದಾದಿಯರು ತಮಾಷೆ ಮಾಡುತ್ತಾ, ನಗಾಡುವುದರಲ್ಲಿ ಮಗ್ನರಾಗಿದ್ದರು ಎಂದು ಆರೋಪಿಸಲಾಗಿದೆ. “ವೈದ್ಯರಾಗಲಿ ಅಥವಾ ಬೇರೆ ಯಾರೇ ಆಗಲಿ ಸೌಮ್ಯವಾಗಿ ಮಾತನಾಡಲಿಲ್ಲ. ತುರ್ತು ಪರಿಸ್ಥಿತಿಯಲ್ಲೂ ಕೂಡಾ ನನ್ನ 14 ತಿಂಗಳ ಮಗುವನ್ನು ವೈದ್ಯರು ಸೂಕ್ತವಾಗಿ ತಪಾಸಣೆ ಮಾಡಲಿಲ್ಲ. ಬದಲಿಗೆ, ಆತನನ್ನು ಅಲ್ಮೋರಾಗೆ ಕರೆದೊಯ್ಯುವಂತೆ ಸೂಚಿಸಿದರು” ಎಂದು ಮೃತ ಮಗುವಿನ ತಂದೆ ಆರೋಪಿಸಿದ್ದಾರೆ.

ಮಗುವಿನ ಮಿದುಳಿನಲ್ಲಿ ರಕ್ತ ಪರಿಚಲನೆಗೆ ಅಡ್ಡಿಯುಂಟಾಗಿದ್ದು, ಜಿಲ್ಲಾಸ್ಪತ್ರೆಯಲ್ಲಿ ಮಕ್ಕಳ ತೀವ್ರ ನಿಗಾ ಘಟಕ, ನರತಜ್ಞರು ಹಾಗೂ ಹೃದ್ರೋಗ ತಜ್ಞರ ಕೊರತೆ ಇದ್ದುದರಿಂದ, ಮಗುವನ್ನು ಉನ್ನತ ಆರೋಗ್ಯ ಕೇಂದ್ರಕ್ಕೆ ವೈದ್ಯರು ಶಿಫಾರಸು ಮಾಡಿದ್ದಾರೆ ಎಂದು ಚಮೋಲಿ ಜಿಲ್ಲಾಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕುಮಾರ್ ಆದಿತ್ಯ ತಿವಾರಿ ಸ್ಪಷ್ಟನೆ ನೀಡಿದ್ದಾರೆ. ಈ ಘಟನೆಯ ಕುರಿತು ತನಿಖೆ ನಡೆಸಲು ಸಮಿತಿಯೊಂದನ್ನು ರಚಿಸಿದ್ದು, ಈ ಸಂಬಂಧ ಸಮಿತಿ ವರದಿಯನ್ನು ಸಲ್ಲಿಸಿದೆ ಎಂದೂ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News