ಆಪರೇಶನ್ ಸಿಂಧು | ಇರಾನ್ ನಿಂದ 310 ಭಾರತೀಯ ವಿದ್ಯಾರ್ಥಿಗಳ ಆಗಮನ
ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ: ಯುದ್ಧ ಪೀಡಿತ ಇರಾನ್ ನಿಂದ ಭಾರತೀಯರನ್ನು ಕರೆತರುವ ಪ್ರಕ್ರಿಯೆಯನ್ನು ಭಾರತ ಚುರುಕುಗೊಳಿಸಿದ್ದು, ಮಶಾದ್ ನಿಂದ 310 ಭಾರತೀಯ ಪ್ರಜೆಗಳನ್ನು ಹೊತ್ತ ಇನ್ನೊಂದು ವಿಮಾನವು ಶನಿವಾರ ಮಧ್ಯಾಹ್ನ 4:30ರ ವೇಳೆಗೆ ಹೊಸದಿಲ್ಲಿಯ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿಯಿತು.
ಇದರೊಂದಿಗೆ, ‘ಆಪರೇಶ್ ಸಿಂಧು’ ಅಡಿ ಇರಾನ್ ನಿಂದ ತೆರವುಗೊಳಿಸಲ್ಪಟ್ಟ ಭಾರತೀಯರ ಒಟ್ಟು ಸಂಖ್ಯೆ 827ಕ್ಕೇರಿದೆ. 256 ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ಮಹಾನ್‌ಏರ್ ವಿಮಾನವು ಶನಿವಾರದಂದು ದಿಲ್ಲಿ ವಿಮಾನನಿಲ್ದಾಣದಲ್ಲಿ ಸುರಕ್ಷಿತವಾಗಿ ಬಂದಿಳಿಯಿತು. ಭಾರತಕ್ಕೆ ವಾಪಾಸಾದ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ಕಾಶ್ಮೀರ ಕಣಿವೆಯ ನಿವಾಸಿಗಳೆನ್ನಲಾಗಿದೆ. ಈ ವಿದ್ಯಾರ್ಥಿಗಳ ಆಗಮದೊಂದಿಗೆ, ಅತ್ಯಂತ ದುಗುಡದಲ್ಲಿದ್ದ ಅವರ ಕುಟುಂಬಿಕರು ಸಮಾಧಾನದ ನಿಟ್ಟುಸಿರೆಳೆಯುವಂತಾಗಿದೆ. ಯುದ್ಧಪೀಡಿತ ಇರಾನ್ ನಲ್ಲಿ ಕಳೆದ ಕೆಲವು ದಿನಗಳಿಂದ ಅನಿಶ್ಚಿತತೆ ಹಾಗೂ ಭೀತಿಯಿಂದ ದಿನದೂಡಿದ್ದ ಈ ವಿದ್ಯಾರ್ಥಿಗಳು ಭಾರೀ ಬಳಲಿದಂತೆ ಕಂಡುಬರುತ್ತಿದ್ದರು
ತೆರವು ಕಾರ್ಯಾಚರಣೆಯಲ್ಲಿ ಅಧಿಕಾರಿಗಳ ಜೊತೆ ನಿಕಟ ಸಮನ್ವಯ ಹೊಂದಿದ್ದ ಜಮ್ಮುಕಾಶ್ಮೀರ ವಿದ್ಯಾರ್ಥಿಗಳ ಸಂಘವು ಕೇಂದ್ರ ಸರಕಾರದ ಅಧಿಕಾರಿಗಳ ತುರ್ತು ಕಾರ್ಯಾಚರಣೆಗೆ ಕೃತಜ್ಞತೆ ವ್ಯಕ್ತಪಡಿಸಿದೆ.
ಇರಾನ್ ನಿಂದ ಭಾರತೀಯ ವಿದ್ಯಾರ್ಥಿಗಳನ್ನು ಹೊತ್ತ ಇನ್ನೊಂದು ವಿಮಾನವು ಶನಿವಾರ ತಡರಾತ್ರಿ 11:30ರ ವೇಳೆಗೆ ದಿಲ್ಲಿಯಲ್ಲಿ ಬಂದಿಳಿಯುವ ನಿರೀಕ್ಷೆಯಿದೆಯೆಂದು ಸಂಘವು ತಿಳಿಸಿದೆ. ಭಾರತವು ತನ್ನ ಪ್ರಜೆಗಳನ್ನು ತೆರವುಗೊಳಿಸುವ ಕಾರ್ಯಾಚರಣೆಗೆ ಬೆಂಬಲವಾಗಿ ಇರಾನ್ ತನ್ನ ವಾಯುಕ್ಷೇತ್ರವನ್ನು ತೆರೆದಿಟ್ಟಿತ್ತು.