×
Ad

"ಇವನೊಬ್ಬನೇ ಕುಡಿದ, ನಮಗೆ ನೀಡಿಲ್ಲ ಎಂದು ಭಾವಿಸುತ್ತಿದ್ದಾರೆಯೇ?": ಮೂತ್ರ ಕುಡಿಯುವ ಹೇಳಿಕೆ ಕುರಿತ ಟ್ರೋಲ್‌ಗಳಿಗೆ ನಟ ಪರೇಶ್ ರಾವಲ್ ಪ್ರತಿಕ್ರಿಯೆ

Update: 2025-07-22 23:59 IST

ಪರೇಶ್ ರಾವಲ್ (Photo: PTI)

ಮುಂಬೈ: ಹಿರಿಯ ನಟ ಪರೇಶ್ ರಾವಲ್ ಅವರು ಮೂತ್ರ ಸೇವನೆಯ ಕುರಿತು ನೀಡಿದ ಹಳೆಯ ಹೇಳಿಕೆಯು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದ್ದು, ಈ ಕುರಿತಾದ ಟ್ರೋಲ್‌ ಗಳಿಗೆ ಅವರು ತೀಕ್ಷ್ಣವಾಗಿ ಮತ್ತು ವ್ಯಂಗ್ಯಭರಿತವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

"ನಾನು ಅವರಿಗೆ (ಮೂತ್ರ) ನೀಡಿಲ್ಲ, ಅಲ್ಲವೇ? ನಾನು ನೀಡದ ಕಾರಣ ಅವರಿಗೆ ತೊಂದರೆ ಆಗಿದೆಯೇ? ಇವನೊಬ್ಬನೇ ಕುಡಿದ ನಮಗೆ ನೀಡಿಲ್ಲವಲ್ಲ ಎಂದು ಟ್ರೋಲರ್ ಗಳು ಭಾವಿಸುತ್ತಿದ್ದಾರೆಯೇ," ಎಂದು ಟ್ರೋಲ್‌ಗಳಿಗೆ ಅವರು ತಿರುಗೇಟು ನೀಡಿದ್ದಾರೆ.

ʼಬಾಲಿವುಡ್ ಹಂಗಾಮಾʼ ಜೊತೆಗಿನ ಸಂದರ್ಶನದಲ್ಲಿ, 40 ವರ್ಷಗಳ ಹಿಂದೆ ತಮಗೆ ಸಂಭವಿಸಿದ ಘಟನೆ ಬಗ್ಗೆ ಮಾತನಾಡಿದ ನಟ ಪರೇಶ್ ರಾವಲ್, “ವಿಷಯ ಎಷ್ಟು ಸರಳವಿದ್ದರೂ ಜನರು ಅದನ್ನು ಬೆಟ್ಟದಿಂದ ಪರ್ವತವನ್ನಾಗಿ ಮಾಡುತ್ತಾರೆ. ನಾನು ನನ್ನ ಅನುಭವವನ್ನು ಹಂಚಿಕೊಂಡೆ. ಅದರಲ್ಲಿ ವಿಶೇಷವೇನಿದೆ? ಜನರು ಮಜಾ ತೆಗೆದುಕೊಳ್ಳಲಿ," ಎಂದು ತಮಾಷೆಯ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಅಲ್ಲದೆ, "ಬಹಳಷ್ಟು ಜನರು ಮೂತ್ರ ಸೇವನೆ ಮಾಡುತ್ತಾರೆ. ನಾನು ಅದನ್ನು ದೊಡ್ಡದು ಮಾಡುವುದಿಲ್ಲ," ಎಂದು ಅವರು ಹೇಳಿದ್ದಾರೆ.

ಎಪ್ರಿಲ್‌ನಲ್ಲಿ, ನಟ ರಾಕೇಶ್ ಪಾಂಡೆ ಅವರೊಂದಿಗಿನ ಚಿತ್ರೀಕರಣದ ವೇಳೆ ಗಾಯಗೊಂಡ ಘಟನೆಯ ಬಗ್ಗೆ ಪರೇಶ್ ರಾವಲ್ ಹೇಳಿಕೊಂಡಿದ್ದರು. ಆ ವೇಳೆ ಅವರನ್ನು ಸಹ ನಟರು ನಾನಾವತಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಆ ಸಂದರ್ಭದಲ್ಲಿ ಅಂದಿನ ಸಾಹಸ ನಿರ್ದೇಶಕ ವೀರು ದೇವಗನ್ ಪರೇಶ್ ರಾವಲ್ ಅವರನ್ನು ಭೇಟಿ ಮಾಡಿ, "ಪ್ರತಿದಿನ ಬೆಳಿಗ್ಗೆ ಮೊದಲಿಗೆ ಸ್ವಂತ ಮೂತ್ರವನ್ನು ಕುಡಿಯಿರಿ. ಫೈಟರ್ ಗಳು ಹೀಗೇ ಮಾಡುತ್ತಾರೆ. ಮದ್ಯ, ಮಾಂಸಾಹಾರ, ತಂಬಾಕು ಬಿಟ್ಟು, ನಿಯಮಿತ ಆಹಾರ ಸೇವಿಸಿ" ಎಂದು ಸಲಹೆ ನೀಡಿದ್ದರು ಎಂದು ರಾವಲ್ ತಿಳಿಸಿದರು.

ಅವರ ಮಾತುಗಳನ್ನು ಗೌರವದಿಂದ ಪಾಲಿಸಿ, 15 ದಿನಗಳ ಕಾಲ ಈ ಪದ್ಧತಿಯನ್ನು ಅನುಸರಿಸಿದ್ದೆ. ನಂತರದ ಎಕ್ಸ್-ರೇ ವರದಿಗಳಲ್ಲಿ ಬೆರಗಾಗುವಷ್ಟು ಸಮಯದೊಳಗೆ ಗುಣಮುಖರಾಗಿದ್ದೆ. ಎರಡೂವರೆ ತಿಂಗಳ ಬದಲಿಗೆ ಒಂದುವರೆ ತಿಂಗಳಲ್ಲಿ ಸಂಪೂರ್ಣ ಗುಣಮುಖರಾಗಿದ್ದೆ ಎಂದು ಪರೇಶ್ ಅವರು ಹೇಳಿಕೊಂಡಿದ್ದರು.

" ನಾನು ಇದನ್ನು ಬಿಯರ್ ಕುಡಿಯುವಂತೆಯೇ ಕುಡಿದು ನಿಯಮಿತವಾಗಿ ಪಾಲಿಸಿದೆ" ಎಂದು ಪರೇಶ್ ರಾವಲ್ ಹೇಳಿದ್ದರು.

ಪರೇಶ್ ರಾವಲ್ ಅವರು ಪ್ರಸ್ತುತ ಪ್ರಿಯದರ್ಶನ್ ನಿರ್ದೇಶನದ ʼಭೂತ್ ಬಾಂಗ್ಲಾʼ ಎಂಬ ಹಾರರ್ ಕಾಮಿಡಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಟಬು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೆಲವು ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಹೇರಾ ಫೇರಿ 3 ಚಿತ್ರದಿಂದ ಹಿಂದೆ ಸರಿದಿದ್ದರೂ, ಇದೀಗ ಅಕ್ಷಯ್ ಕುಮಾರ್ ಮತ್ತು ಸುನೀಲ್ ಶೆಟ್ಟಿ ಅವರೊಂದಿಗೆ ಚಿತ್ರದಲ್ಲಿ ಪರೇಶ್ ರಾವಲ್ ಮತ್ತೆ ಸೇರ್ಪಡೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News