ಮೊಗಾಂಬೊ ಖುಷ್ ಹೈ: ಭಾರತ–ಅಮೆರಿಕ ವ್ಯಾಪಾರ ಒಪ್ಪಂದದ ಟ್ರಂಪ್ ಘೋಷಣೆಗೆ ಕಾಂಗ್ರೆಸ್ ವ್ಯಂಗ್ಯ
PC: x.com/IndiaToday
ಹೊಸದಿಲ್ಲಿ: ಭಾರತ ಮತ್ತು ಅಮೆರಿಕ ನಡುವಿನ ವ್ಯಾಪಾರ ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ದಿಢೀರನೇ ವಾಷಿಂಗ್ಟನ್‌ನಿಂದ ಪ್ರಕಟಿಸಿದ ಹಿನ್ನೆಲೆಯಲ್ಲಿ, ಕಾಂಗ್ರೆಸ್ ಪಕ್ಷ ಪ್ರಧಾನಿ ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ಅಮೆರಿಕ ಸರಕುಗಳ ಮೇಲೆ ವಿಧಿಸುವ ಸುಂಕ ಹಾಗೂ ಇತರ ವ್ಯಾಪಾರ ತಡೆಗಳನ್ನು ಭಾರತ ನಿವಾರಿಸಲಿದೆ ಮತ್ತು ಇದಕ್ಕೆ ಪ್ರತಿಯಾಗಿ ಅಮೆರಿಕ ವಿಧಿಸುತ್ತಿದ್ದ ಸುಂಕವನ್ನು ಕಡಿತಗೊಳಿಸಲಿದೆ ಎಂದು ಟ್ರಂಪ್ ಘೋಷಿಸಿದ್ದರು.
ಆಪರೇಷನ್ ಸಿಂಧೂರ ಸ್ಥಗಿತಗೊಳಿಸುವುದು, ರಷ್ಯಾ ಮತ್ತು ವೆನೆಜುವೆಲಾದಿಂದ ಭಾರತ ಕಚ್ಚಾ ತೈಲ ಖರೀದಿಸುವ ಸಂಬಂಧದ ಮಾಹಿತಿ ಹಾಗೂ ಇದೀಗ ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದದ ಘೋಷಣೆ ಎಲ್ಲಾ ಅಮೆರಿಕದ ರಾಜಧಾನಿಯಿಂದಲೇ ಆಗುತ್ತಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಂ ರಮೇಶ್ ಅವರು ಎಕ್ಸ್ ಪೋಸ್ಟ್‌ನಲ್ಲಿ ದೂರಿದ್ದಾರೆ.
“ಟ್ರಂಪ್ ಅವರಿಗೆ ಪ್ರಧಾನಿ ಮೋದಿಯವರ ಮೇಲೆ ಸಹಜವಾಗಿಯೇ ಹತೋಟಿ ಇದೆ. ಪ್ರಧಾನಿ ಅವರೊಂದಿಗೆ ಇರುವಂತೆ ಕಾಣುವ ನಕಲಿ ಚಿತ್ರವನ್ನೂ ಅವರು ಸೃಷ್ಟಿಸಿದಂತಿದೆ. ಈ ಒಪ್ಪಂದವೇ ಎಲ್ಲ ಒಪ್ಪಂದಗಳ ಪ್ರವರ್ತಕನಾಗಬಹುದೇ?” ಎಂದು ಪ್ರಶ್ನಿಸಿರುವ ಅವರು, ಇದನ್ನು ವ್ಯಂಗ್ಯವಾಗಿ ‘ಮೊಗಾಂಬೊ ಖುಷ್ ಹೈ’ ಎಂದಿದ್ದಾರೆ.
ಇದಕ್ಕೂ ಮುನ್ನ ಭಾರತ ರಷ್ಯಾದಿಂದ ತೈಲ ಖರೀದಿಯನ್ನು ನಿಲ್ಲಿಸಿ ಅಮೆರಿಕ ಹಾಗೂ ವೆನೆಜುವೆಲಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲ ಖರೀದಿಸಲಿದೆ. ಈ ವರ್ಗಾವಣೆಯು ರಷ್ಯಾ–ಉಕ್ರೇನ್ ಯುದ್ಧವನ್ನು ನಿಲ್ಲಿಸಲು ನೆರವಾಗಲಿದೆ ಎಂದು ಟ್ರಂಪ್ ಅವರು ಟ್ರುತ್ ಸೋಶಿಯಲ್‌ನಲ್ಲಿ ಪ್ರಕಟಿಸಿದ್ದರು. ಈ ಹಿನ್ನೆಲೆಯಲ್ಲಿ ಅಮೆರಿಕ ಪ್ರತಿಸುಂಕವನ್ನು ಶೇಕಡಾ 25ರಿಂದ 18ಕ್ಕೆ ಇಳಿಸಲಿದೆ. ಅಂತೆಯೇ ಭಾರತ ಎಲ್ಲ ಸುಂಕಗಳು ಮತ್ತು ಇತರ ತಡೆಗಳನ್ನು ಶೂನ್ಯಕ್ಕೆ ಇಳಿಸಲಿದೆ ಎಂದು ಅವರು ಘೋಷಿಸಿದ್ದರು. ಈ ಹೇಳಿಕೆಯನ್ನು ಪ್ರಧಾನಿ ಮೋದಿ ಸ್ವಾಗತಿಸಿದ್ದರು.