×
Ad

ಜಾತ್ಯತೀತತೆ ಸಂರಕ್ಷಣೆಗೆ ಪ್ರಾರ್ಥನಾ ಸ್ಥಳಗಳ ಕಾಯ್ದೆ ಅಗತ್ಯ: ಸುಪ್ರೀಂ ಮೊರೆ ಹೋದ ಕಾಂಗ್ರೆಸ್

Update: 2025-01-17 08:35 IST

ಹೊಸದಿಲ್ಲಿ: ಭಾರತದ ಸಂವಿಧಾನದ ಮೂಲ ಲಕ್ಷಣ ಹಾಗೂ ಕೋಮು ಸಾಮರಸ್ಯವನ್ನು ಕಾಪಾಡುವಲ್ಲಿ ಅಗತ್ಯ ಎನಿಸಿದ ಜಾತ್ಯತೀತ ತತ್ವವನ್ನು ಸಂರಕ್ಷಿಸುವ ಸಲುವಾಗಿ ಪ್ರಾರ್ಥನಾ ಸ್ಥಳಗಳ (ವಿಶೇಷ ಸವಲತ್ತು) ಕಾಯ್ದೆ ಅನಿವಾರ್ಯ ಎಂದು ಕಾಂಗ್ರೆಸ್ ಪ್ರತಿಪಾದಿಸಿದೆ. ಈ ಸಂಬಂಧ ಪಕ್ಷ ಸುಪ್ರೀಂಕೋರ್ಟ್ನ ಮೊರೆ ಹೋಗಿದೆ.

ಬಿಜೆಪಿಯ ಅಶ್ವಿನಿ ಕುಮಾರ್ ಉಪಾಧ್ಯಾಯ, ಮಾಜಿ ಸಂಸದ ಸುಬ್ರಹ್ಮಣ್ಯನ್ ಸ್ವಾಮಿ ಮತ್ತು ಇತರ ಹಿಂದೂ ಸಂಘಟನೆಗಳು 1991ರ ಈ ಕಾನೂನಿನ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಕೋರಿರುವ ಕಾಂಗ್ರೆಸ್ ಪಕ್ಷ, ಈ ಅರ್ಜಿಗಳನ್ನು ಸಾರಾಸಗಟಾಗಿ ತಿರಸ್ಕರಿಸಬೇಕು ಎಂದು ಆಗ್ರಹಿಸಿದೆ.

ಅಯೋಧ್ಯೆ ತೀರ್ಪು ಸೇರಿದಂತೆ ದೇಶದ ಅತ್ಯುನ್ನತ ಕೋರ್ಟ್ ಈ ಹಿಂದೆ ನೀಡಿರುವ ತೀರ್ಪುಗಳಲ್ಲಿ, ನಮ್ಮ ಗುರಿ ದೇಶದ ಭವಿಷ್ಯದ ಬಗ್ಗೆ ಇರಬೇಕೇ ವಿನಃ ಈ ಹಿಂದೆ ಆಗಿರುವ ದೌರ್ಜನ್ಯಗಳನ್ನು ಸರಿಪಡಿಸುವ ಪ್ರಯತ್ನದ ಕಡೆಗೆ ಇರಬಾರದು ಎಂದು ಪಕ್ಷ ಪ್ರತಿಪಾದಿಸಿದೆ.

"ಪ್ರಸ್ತುತ ಎದುರಾಗಿರುವ ಸವಾಲು ದುರುದ್ದೇಶಪೂರ್ವಕವಾಗಿದ್ದು, ದೇಶದಲ್ಲಿ ಜಾರಿಯಲ್ಲಿರುವ ಜಾತ್ಯತೀತ ತತ್ವಗಳನ್ನು ಕಡೆಗಣಿಸುವಂಥದ್ದು. ಪ್ರಾರ್ಥನಾ ಸ್ಥಳಗಳ ಕಾಯ್ದೆಯ ಸಾಂವಿಧಾನಿಕ ಮತ್ತು ಸಾಮಾಜಿಕ ಮಹತ್ವಕ್ಕೆ ಒತ್ತು ನೀಡುವ ಸಲುವಾಗಿ ಕೋರ್ಟ್ ಮಧ್ಯಪ್ರವೇಶಿಸುವುದು ಅಗತ್ಯ. ಈ ಸಂಬಂಧ ಮಾಡುವ ಯಾವುದೇ ತಿದ್ದುಪಡಿಗಳು ಭಾರತದ ಕೋಮು ಸಾಮರಸ್ಯ ಮತ್ತು ಜಾತ್ಯತೀತ ಬಂಧಕ್ಕೆ ಮಾರಕವಾಗಬಹುದು ಹಾಗೂ ಈ ಮೂಲಕ ದೇಶದ ಸಾರ್ವಭೌಮತ್ವ ಮತ್ತು ಸಮಗ್ರತೆಗೆ ಧಕ್ಕೆ ತರಬಹುದು ಎಂದು ಕಾಂಗ್ರೆಸ್ ತನ್ನ ಅರ್ಜಿಯಲ್ಲಿ ವಿವರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News