‘ಮನ್ ಕಿ ಬಾತ್’ನಲ್ಲಿ ಕೇರಳದ ‘ಕಾರ್ತುಂಬಿ’ ಕೊಡೆಗಳನ್ನು ಪ್ರಸ್ತಾವಿಸಿದ ಪ್ರಧಾನಿ ಮೋದಿ
Photo : newsonair.gov.in
ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯವರು ರವಿವಾರ ತನ್ನ 111ನೇ ಮಾಸಿಕ ರೇಡಿಯೊ ಕಾರ್ಯಕ್ರಮ ‘ಮನ್ ಕಿ ಬಾತ್’ನಲ್ಲಿ ಕೇರಳದ ಅಟ್ಟಪ್ಪಾಡಿಯಲ್ಲಿ ತಯಾರಾಗುವ ವಿಶಿಷ್ಟ ಕಾರ್ತುಂಬಿ ಕೊಡೆಗಳು ಮತ್ತು ರಾಜ್ಯದಲ್ಲಿ ಅವುಗಳ ಸಾಂಸ್ಕೃತಿಕ ಮಹತ್ವದ ಕುರಿತು ಮಾತನಾಡಿದರು. 2024ರ ಸಾರ್ವತ್ರಿಕ ಚುನಾವಣೆಗಳ ಬಳಿಕ ಇದು ಅವರ ಪ್ರಥಮ ರೇಡಿಯೊ ಕಾರ್ಯಕ್ರಮವಾಗಿತ್ತು.
‘ಒಂದು ವಿಶೇಷ ರೀತಿಯ ಕೊಡೆಯ ಬಗ್ಗೆ ನಾನು ನಿಮಗೆ ಹೇಳಬೇಕಿದೆ. ಈ ಕೊಡೆಗಳನ್ನು ನಮ್ಮ ಕೇರಳದಲ್ಲಿ ತಯಾರಿಸಲಾಗುತ್ತದೆ. ಕೇರಳದ ಸಂಸ್ಕೃತಿಯಲ್ಲಿ ಈ ಕಾರ್ತುಂಬಿ ಕೊಡೆಗಳು ವಿಶೇಷ ಮಹತ್ವವನ್ನು ಪಡೆದಿವೆ. ಕೊಡೆಗಳು ಅಲ್ಲಿಯ ಹಲವು ಸಂಪ್ರದಾಯಗಳು ಮತ್ತು ಆಚರಣೆಗಳಲ್ಲಿ ಪ್ರಮುಖ ಭಾಗವಾಗಿವೆ ’ ಎಂದು ಹೇಳಿದ ಮೋದಿ,‘ಅಟ್ಟಪ್ಪಾಡಿಯಲ್ಲಿ ನಮ್ಮ ಬುಡಕಟ್ಟು ಸೋದರಿಯರು ಈ ಕೊಡೆಗಳನ್ನು ತಯಾರಿಸುತ್ತಾರೆ. ಇಂದು ದೇಶಾದ್ಯಂತ ಈ ಕೊಡೆಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಅವು ಆನ್ಲೈನ್ ನಲ್ಲಿಯೂ ಮಾರಾಟವಾಗುತ್ತಿವೆ. ಈ ಕೊಡೆಗಳು ಮಹಿಳೆಯರೇ ನಡೆಸುವ ವಟ್ಟಲಕ್ಕಿ ಕೋಆಪರೇಟಿವ್ ಅಗ್ರಿಕಲ್ಚರಲ್ ಸೊಸೈಟಿಯ ಮೇಲ್ವಿಚಾರಣೆಯಲ್ಲಿ ತಯಾರಾಗುತ್ತವೆ’ ಎಂದು ತಿಳಿಸಿದರು.
‘ಕಾರ್ತುಂಬಿ ಕೊಡೆಗಳು ಕೇರಳದ ಪುಟ್ಟ ಗ್ರಾಮಗಳಿಂದ ಬಹುರಾಷ್ಟ್ರೀಯ ಕಂಪನಿಗಳನ್ನು ತಲುಪಿವೆ. ಇದು ದೇಶಕ್ಕೆ ಅದರ ವಾಣಿಜ್ಯಿಕ ಮೌಲ್ಯಗಳನ್ನು ಒತ್ತಿ ಹೇಳುವುದು ಮಾತ್ರವಲ್ಲ,ನಮ್ಮ ಸಂಸ್ಕೃತಿಯನ್ನು ಜಗತ್ತಿಗೆ ಪ್ರದರ್ಶಿಸುವಲ್ಲಿ ಅದರ ಪಾತ್ರವನ್ನೂ ಎತ್ತಿ ತೋರಿಸಿದೆ ’ ಎಂದು ಮೋದಿ ಹೇಳಿದರು.