ಸೌದಿ ಬಸ್ ಅಪಘಾತದಲ್ಲಿ ಭಾರತೀಯರ ಮೃತ್ಯು: ಪ್ರಧಾನಿ ಮೋದಿ ಸಂತಾಪ
ಪ್ರಧಾನಿ ನರೇಂದ್ರ ಮೋದಿ (Photo: PTI)
ರಿಯಾದ್: ಸೌದಿ ಅರೇಬಿಯಾದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ 45 ಮಂದಿ ಭಾರತೀಯ ಯಾತ್ರಾರ್ಥಿಗಳ ಮೃತಪಟ್ಟಿರುವ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ಸಂತ್ರಸ್ತರಿಗೆ ಎಲ್ಲ ಅಗತ್ಯ ನೆರವನ್ನು ಒದಗಿಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, “ಮದೀನಾದಲ್ಲಿ ಸಂಭವಿಸಿದ ಅಪಘಾತದಿಂದ ತೀವ್ರ ದುಃಖಿತನಾಗಿದ್ದೇನೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ನನ್ನ ಸಾಂತ್ವನಗಳು. ಅಪಘಾತದಲ್ಲಿ ಗಾಯಗೊಂಡಿರುವ ಎಲ್ಲರೂ ಶೀಘ್ರ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ರಿಯಾದ್ ನಲ್ಲಿನ ನಮ್ಮ ರಾಜತಾಂತ್ರಿಕ ಕಚೇರಿ ಹಾಗೂ ಜಿದ್ದಾದಲ್ಲಿನ ನಮ್ಮ ದೂತಾವಾಸ ಘಟನೆಯ ಸಂತ್ರಸ್ತರಿಗೆ ಎಲ್ಲ ಅಗತ್ಯ ನೆರವನ್ನು ಒದಗಿಸುತ್ತಿದೆ. ನಮ್ಮ ಅಧಿಕಾರಿಗಳೂ ಕೂಡಾ ಸೌದಿ ಅರೇಬಿಯಾ ಪ್ರಾಧಿಕಾರಗಳೊಂದಿಗೆ ನಿಕಟ ಸಂಪರ್ಕದಲ್ಲಿದ್ದಾರೆ” ಎಂದು ಹೇಳಿದ್ದಾರೆ.
ಸೋಮವಾರ ಉಮ್ರಾಗಾಗಿ ತೆರಳಿದ್ದ ಯಾತ್ರಾರ್ಥಿಗಳನ್ನು ಕೊಂಡೊಯ್ಯುತ್ತಿದ್ದ ಬಸ್ ಒಂದು ಮದೀನಾ ಬಳಿ ಡೀಸೆಲ್ ಟ್ಯಾಂಕರ್ ಒಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ 45 ಮಂದಿ ಯಾತ್ರಾರ್ಥಿಗಳು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ. ಇವರಲ್ಲಿ ಬಹುತೇಕರು ಹೈದರಾಬಾದ್ ಮೂಲದ ಯಾತ್ರಾರ್ಥಿಗಳು ಎಂದು ಹೇಳಲಾಗಿದೆ.
ಈ ಎಲ್ಲ ಭಾರತೀಯ ಉಮ್ರಾ ಯಾತ್ರಾರ್ಥಿಗಳನ್ನು ಮೆಕ್ಕಾದಿಂದ ಮದೀನಾಕ್ಕೆ ಕೊಂಡೊಯ್ಯುತ್ತಿದ್ದ ಬಸ್ ಸೋಮವಾರ ಮುಂಜಾನೆ ಸುಮಾರು 1.30ರ ವೇಳೆಗೆ ಅಪಘಾತಕ್ಕೀಡಾಗಿದೆ.
Deeply saddened by the accident in Medinah involving Indian nationals. My thoughts are with the families who have lost their loved ones. I pray for the swift recovery of all those injured. Our Embassy in Riyadh and Consulate in Jeddah are providing all possible assistance. Our…
— Narendra Modi (@narendramodi) November 17, 2025