×
Ad

ಫೆಲೆಸ್ತೀನ್‌ ಜನತೆಗೆ ಭಾರತದ ಬೆಂಬಲ ನಿರಂತರ: ಪ್ರಧಾನಿ ನರೇಂದ್ರ ಮೋದಿ

Update: 2026-02-01 18:13 IST

Photo: X/@pmofa via PTI

ಹೊಸದಿಲ್ಲಿ: ಫೆಲೆಸ್ತೀನ್‌ ಜನರಿಗೆ ಭಾರತದ ನಿರಂತರ ಬೆಂಬಲ ಮುಂದುವರಿಯಲಿದೆ. ಪಶ್ಚಿಮ ಏಷ್ಯಾದಲ್ಲಿ ಶಾಂತಿ ಹಾಗೂ ಸ್ಥಿರತೆಯನ್ನು ಕಾಪಾಡುವತ್ತ ನಡೆಯುತ್ತಿರುವ ಪ್ರಯತ್ನಗಳಿಗೆ ಭಾರತ ಸದಾ ಕೈಜೋಡಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.

ಭಾರತ–ಅರಬ್ ವಿದೇಶಾಂಗ ಸಚಿವರ ಎರಡನೇ ಸಭೆಯ ನಿಮಿತ್ತ ಶನಿವಾರ ಹೊಸದಿಲ್ಲಿಗೆ ಆಗಮಿಸಿದ್ದ ಅರಬ್ ರಾಷ್ಟ್ರಗಳ ವಿದೇಶಾಂಗ ಸಚಿವರು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಪ್ರಾದೇಶಿಕ ಶಾಂತಿ ಹಾಗೂ ಸ್ಥಿರತೆಯನ್ನು ಉತ್ತೇಜಿಸುವಲ್ಲಿ ಪ್ರಧಾನಿ ಮೋದಿ ವಹಿಸಿರುವ ಪಾತ್ರವನ್ನು ಸಚಿವರು ಶ್ಲಾಘಿಸಿದರು.

ಭಾರತ ಮತ್ತು ಅರಬ್ ಪ್ರಪಂಚದ ನಡುವಿನ ಆಳವಾದ ಐತಿಹಾಸಿಕ ಹಾಗೂ ಜನರಿಂದ ಜನರ ಬಾಂಧವ್ಯವನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು. ಈ ಬಾಂಧವ್ಯವೇ ಎರಡೂ ಕಡೆಯ ನಡುವಿನ ಸಂಬಂಧಗಳನ್ನು ವರ್ಷಗಳಿಂದ ಬಲಪಡಿಸುತ್ತಿದೆ ಎಂದು ಪ್ರಧಾನಮಂತ್ರಿ ಕಚೇರಿ ಪ್ರಕಟಣೆ ತಿಳಿಸಿದೆ.

ಮುಂಬರುವ ವರ್ಷಗಳಲ್ಲಿ ಭಾರತ–ಅರಬ್ ಸಂಬಂಧವನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ತಮ್ಮ ದೃಷ್ಟಿಕೋನವನ್ನು ಪ್ರಧಾನಿ ವಿವರಿಸಿದರು. ವ್ಯಾಪಾರ, ಹೂಡಿಕೆ, ಇಂಧನ, ತಂತ್ರಜ್ಞಾನ, ಆರೋಗ್ಯ ಸೇರಿದಂತೆ ವಿವಿಧ ಆದ್ಯತೆಯ ಕ್ಷೇತ್ರಗಳಲ್ಲಿ ಸಹಕಾರವನ್ನು ಗಾಢಗೊಳಿಸುವ ಭಾರತದ ಬದ್ಧತೆಯನ್ನು ಅವರು ಪುನರುಚ್ಚರಿಸಿದರು.

ಗಾಝಾ ಶಾಂತಿ ಯೋಜನೆ ಸೇರಿದಂತೆ, ಈಗ ನಡೆಯುತ್ತಿರುವ ಶಾಂತಿ ಪ್ರಯತ್ನಗಳನ್ನು ಸ್ವಾಗತಿಸಿದ ಪ್ರಧಾನಿ, ಫೆಲೆಸ್ತೀನ್‌ ಜನತೆಗೆ ಭಾರತದ ಬೆಂಬಲ ನಿರಂತರವಾಗಿರಲಿದೆ ಎಂದು ಸ್ಪಷ್ಟಪಡಿಸಿದರು. ಪ್ರಾದೇಶಿಕ ಶಾಂತಿ ಮತ್ತು ಸ್ಥಿರತೆಯತ್ತ ಅರಬ್ ಲೀಗ್ ವಹಿಸಿರುವ ಪಾತ್ರಕ್ಕೂ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News