×
Ad

Maharashtra| ಆಂಬ್ಯುಲೆನ್ಸ್ ನಲ್ಲಿ 2.6 ಕೋಟಿ ರೂ.ಮೌಲ್ಯದ ಗಾಂಜಾ ಸಾಗಾಟ| ಹಾವು ಹಿಡಿಯುವ ಮೂಲಕ ಹೆಸರುಗಳಿಸಿದ್ದ ಯುಟ್ಯೂಬರ್ ಬಂಧನ

Update: 2026-02-01 16:15 IST
Screengrab : X \ @iAtulKrishan1

ಮುಂಬೈ: ಹಾವುಗಳನ್ನು ರಕ್ಷಣೆ ಮಾಡುವ ವೀಡಿಯೋಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೆಸರುಗಳಿಸಿದ್ದ ಮಹಾರಾಷ್ಟ್ರದ ಯುಟ್ಯೂಬರ್ ಆಕಾಶ್ ಜಾಧವ್ ನನ್ನು ಛತ್ತೀಸ್‌ಗಢದ ಮಹಾಸಮುಂದ್ ಜಿಲ್ಲೆಯ ಪೊಲೀಸರು ಗಾಂಜಾ ಸಾಗಣೆ ಪ್ರಕರಣದಲ್ಲಿ ಬಂಧಿಸಿದ್ದಾರೆ.

ಯೂಟ್ಯೂಬ್‌ನಲ್ಲಿ ಸುಮಾರು 56.8 ಲಕ್ಷ ಚಂದಾದಾರರು ಮತ್ತು ಇನ್ಸ್ಟಾಗ್ರಾಮ್‌ನಲ್ಲಿ 3.17 ಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜಾಧವ್, ಅಂತರ್ ರಾಜ್ಯ ಮಾದಕವಸ್ತು ಜಾಲದ ಭಾಗವಾಗಿದ್ದಾನೆ ಎಂದು ತಿಳಿದು ಬಂದಿದೆ.

ಮಹಾರಾಷ್ಟ್ರದ ಅಹಲ್ಯಾಪುರದ ನಿವಾಸಿ ಆಕಾಶ್ ಜಾಧವ್ ಸಾಮಾಜಿಕ ಜಾಲತಾಣಗಳಲ್ಲಿ 'ಸರ್ಪ್ ಮಿತ್ರ' (ಹಾವು ರಕ್ಷಕ) ಎಂದೇ ಪರಿಚಿತರಾಗಿದ್ದಾರೆ. ಹಾವುಗಳನ್ನು ರಕ್ಷಿಸುವ ಮತ್ತು ವನ್ಯಜೀವಿಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಹೆಸರುಗಳಿಸಿದ್ದರು.

ಆದರೆ, ಒಡಿಶಾದಿಂದ ಮಹಾರಾಷ್ಟ್ರಕ್ಕೆ ಗಾಂಜಾ ಸಾಗಣೆಯಲ್ಲಿ ಆಕಾಶ್ ಜಾಧವ್ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರು ಆರೋಪಿಸಿದ್ದಾರೆ.

ಮಹಾಸಮುಂದ್ ಪೊಲೀಸರು ವಾಹನ ತಪಾಸಣೆಯ ವೇಳೆ ಆಂಬ್ಯುಲೆನ್ಸ್ ಅನ್ನು ತಡೆದು ಪರಿಶೀಲನೆ ನಡೆಸಿದಾಗ ಆಂಬುಲೆನ್ಸ್ ನಲ್ಲಿ 5 ಕ್ವಿಂಟಾಲ್ ಮತ್ತು 20 ಕಿಲೋಗ್ರಾಂಗಳಷ್ಟು ಗಾಂಜಾ ಸಾಗಿಸುತ್ತಿರುವುದು ಕಂಡುಬಂದಿದೆ. ಇದರ ಮೌಲ್ಯ ಸುಮಾರು 2.6 ಕೋಟಿ ರೂ. ಎಂದು ಪೊಲೀಸರು ಅಂದಾಜಿಸಿದ್ದಾರೆ.

ಈ ಮಾದಕದ್ರವ್ಯ ಜಾಲದ ಬಗ್ಗೆ ವಿವರವಾದ ತನಿಖೆ ನಡೆಸಿದ ಪೊಲೀಸರು ಆಕಾಶ್ ಜಾಧವ್ ಸೇರಿದಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಆರೋಪಿಗಳನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News