Union Budget 2026 | ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಯಿಲ್ಲ; ಹೊಸ ಐಟಿಆರ್ ಗಡುವು, ಟಿಸಿಎಸ್ ಮತ್ತು ಟಿಡಿಎಸ್ ಬದಲಾವಣೆಗಳ ವಿವರ ಇಲ್ಲಿದೆ...
ವಿತ್ತಸಚಿವೆ ನಿರ್ಮಲಾ ಸೀತಾರಾಮನ್ (Photo: PTI)
ಹೊಸದಿಲ್ಲಿ: ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದು ಬಾರಿಯ,ಆರು ತಿಂಗಳು ಅವಧಿಯ ವಿದೇಶಿ ಆಸ್ತಿ ಬಹಿರಂಗ ಯೋಜನೆಯನ್ನು ಘೋಷಿಸುವುದರೊಂದಿಗೆ 2026ನೇ ಸಾಲಿನ ಕೇಂದ್ರ ಮುಂಗಡಪತ್ರದಲ್ಲಿ ಯುವ ವೃತ್ತಿಪರರು, ವಿದ್ಯಾರ್ಥಿಗಳು,ಟೆಕ್ ಉದ್ಯೋಗಿಗಳು ಮತ್ತು ಸ್ಥಳಾಂತರಿತ ಅನಿವಾಸಿ ಭಾರತೀಯರು ಸೇರಿದಂತೆ ಸಣ್ಣ ತೆರಿಗೆದಾರರಿಗೆ ಉತ್ತೇಜನ ಲಭಿಸಿದೆ.
ಈ ಯೋಜನೆಯು ಒಂದು ಕೋಟಿ ರೂ.ವರೆಗಿನ ವಿದೇಶಿ ಆದಾಯವನ್ನು ಘೋಷಿಸುವಲ್ಲಿ ವಿಫಲಗೊಂಡವರಿಗೆ ಅಥವಾ ಆದಾಯವನ್ನು ಘೋಷಿಸಿದ್ದರೂ ಐದು ಕೋಟಿ ರೂ.ವರೆಗಿನ ವಿದೇಶಗಳಲ್ಲಿ ಗಳಿಸಿದ ಆಸ್ತಿಗಳನ್ನು ಬಹಿರಂಗ ಪಡಿಸದ ವ್ಯಕ್ತಿಗಳಿಗೆ ಭಾರೀ ದಂಡವನ್ನು ಎದುರಿಸದೆ ತಮ್ಮ ಫೈಲಿಂಗ್‌ಗಳನ್ನು ಕ್ರಮಬದ್ಧಗೊಳಿಸಲು ಅವಕಾಶವನ್ನು ನೀಡುತ್ತದೆ.
ಬಹಿರಂಗಪಡಿಸುವಲ್ಲಿ ಅನುದ್ದಿಷ್ಟವಾಗಿ ವಿಫಲಗೊಂಡ ವ್ಯಕ್ತಿಗಳಿಗೆ ಕಾನೂನು ಪಾಲನೆಯನ್ನು ಸುಲಭಗೊಳಿಸುವ ಮತ್ತು ಹೆಚ್ಚಿನ ವಿದೇಶಿ ಆಸ್ತಿಗಳನ್ನು ಔಪಚಾರಿಕ ತೆರಿಗೆ ಜಾಲಕ್ಕೆ ಒಳಪಡಿಸುವುದು ಈ ಯೋಜನೆಯ ಗುರಿಯಾಗಿದೆ ಎಂದು ಸೀತಾರಾಮನ್ ಬಜೆಟ್ ಭಾಷಣದಲ್ಲಿ ತಿಳಿಸಿದರು.
ಇದರ ಜೊತೆಗೆ ಆದಾಯ ತೆರಿಗೆ ಕಾಯ್ದೆ 2025 ಎಪ್ರಿಲ್ 1,2026ರಿಂದ ಜಾರಿಗೆ ಬರಲಿದೆ ಎಂದು ಸೀತಾರಾಮನ್ ಹೇಳಿದರು. ಸರಳೀಕೃತ ನಿಯಮಗಳು ಮತ್ತು ಫಾರಮ್‌ಗಳನ್ನು ಶೀಘ್ರವೇ ಅಧಿಸೂಚಿಸಲಾಗುವುದು.
ನಿಯಮ ಪಾಲನೆಯನ್ನು ಸುಗಮಗೊಳಿಸಲು ಹಲವಾರು ಹೆಚ್ಚುವರಿ ಕ್ರಮಗಳನ್ನೂ ಮುಂಗಡಪತ್ರವು ಪರಿಚಯಿಸಿದೆ. ಸರಳೀಕೃತ ತೆರಿಗೆ ಫಾರಮ್‌ಗಳು,ಮೋಟರ್ ಅಪಘಾತಗಳ ಪರಿಹಾರದ ಮೇಲೆ ಸಿಗುವ ಬಡ್ಡಿಯ ಮೇಲೆ ತೆರಿಗೆ ವಿನಾಯತಿ,ವಿದೇಶ ಪ್ರವಾಸ ಪ್ಯಾಕೇಜ್‌ಗಳ ಮೇಲೆ ಮೂಲದಲ್ಲಿ ಸಂಗ್ರಹಿಸಲಾದ ತೆರಿಗೆ (ಟಿಸಿಎಸ್) ಶೇ.5ರಿಂದ ಶೇ.2ಕ್ಕೆ ಇಳಿಕೆ ಹಾಗೂ ಉದಾರೀಕೃತ ಹಣ ರವಾನೆ ಯೋಜನೆಯಡಿ ಶಿಕ್ಷಣ ಮತ್ತು ವೈದ್ಯಕೀಯ ಶಿಕ್ಷಣಕ್ಕಾಗಿ ಟಿಸಿಎಸ್ ದರ ಶೇ.5ರಿಂದ ಶೇ.2ಕ್ಕೆ ಇಳಿಕೆ ಇವು ಈ ಕ್ರಮಗಳಲ್ಲಿ ಸೇರಿವೆ.
ಪರಿಷ್ಕೃತ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಗಡುವನ್ನು ಡಿ.31ರಿಂದ ಮಾ.31ಕ್ಕೆ ವಿಸ್ತರಿಸಲಾಗಿದ್ದು,ಇದಕ್ಕಾಗಿ ನಾಮಮಾತ್ರ ಶುಲ್ಕವನ್ನು ಪಾವತಿಸಬೇಕಾಗುತ್ತದೆ.