ಕೇಂದ್ರ ಬಜೆಟ್ 2026 | ಕಸ್ಟಮ್ಸ್ ಸುಂಕ ವಿನಾಯಿತಿ: 17 ಕ್ಯಾನ್ಸರ್ ಔಷಧಿಗಳು ಅಗ್ಗ
ಸಚಿವೆ ನಿರ್ಮಲಾ ಸೀತಾರಾಮನ್ | Photo Credit : PTI, freepik
ಹೊಸದಿಲ್ಲಿ: ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸಾ ವೆಚ್ಚ ತಗ್ಗಿಸುವ ಉದ್ದೇಶದಿಂದ 17 ಔಷಧಿಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕಕ್ಕೆ ವಿನಾಯಿತಿ ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಭಾಷಣದಲ್ಲಿ ಘೋಷಿಸಿದರು.
ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಅಗತ್ಯವಿರುವ ಔಷಧಿಗಳು, ಔಷಧೀಯ ಪದಾರ್ಥಗಳು ಮೇಲಿನ ಸುಂಕ ವಿನಾಯಿತಿಯನ್ನು ಇನ್ನೂ ಏಳು ಕಾಯಿಲೆಗಳಿಗೂ ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದರು. ಈ ಕ್ರಮದಿಂದ ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಸಹಾಯವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ಭಾರತದಲ್ಲಿ ಮಧುಮೇಹ, ಕ್ಯಾನ್ಸರ್ ಹಾಗೂ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚಾಗುತ್ತಿರುವುದನ್ನು ಉಲ್ಲೇಖಿಸಿದ ಸಚಿವೆ, ದೀರ್ಘಾಯುಷ್ಯ ಮತ್ತು ಜೀವನಮಟ್ಟ ಸುಧಾರಣೆಗೆ ಜೈವಿಕ ಔಷಧಿಗಳು ಕೈಗೆಟುಕುವ ದರದಲ್ಲಿ ಲಭ್ಯವಾಗುವುದು ಅಗತ್ಯ ಎಂದು ಹೇಳಿದರು.
ಆರೋಗ್ಯ ಕ್ಷೇತ್ರ ಬಲಪಡಿಸುವ ನಿಟ್ಟಿನಲ್ಲಿ ಮೂರು ಹೊಸ ಅಖಿಲ ಭಾರತ ಆಯುರ್ವೇದ ಸಂಸ್ಥೆಗಳ ಸ್ಥಾಪನೆ, ಆಯುಷ್ ಔಷಧಾಲಯಗಳು ಮತ್ತು ಔಷಧ ಪರೀಕ್ಷಾ ಪ್ರಯೋಗಾಲಯಗಳ ಮೇಲ್ದರ್ಜೆಗೇರಿಕೆ ಹಾಗೂ ಜಾಮ್‌ನಗರದಲ್ಲಿರುವ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಸಾಂಪ್ರದಾಯಿಕ ಔಷಧ ಕೇಂದ್ರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದೂ ನಿರ್ಮಲಾ ಸೀತಾರಾಮನ್ ಇದೇ ಸಂದರ್ಭದಲ್ಲಿ ಘೋಷಿಸಿದರು.