×
Ad

ಮಣಿಪುರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ: ಬಂಡುಕೋರ ಸಂಘಟನೆಗಳಿಂದ ಬಹಿಷ್ಕಾರಕ್ಕೆ ಕರೆ; ಕುಕಿ ಸಂಘಟನೆಗಳಿಂದ ಸ್ವಾಗತ

Update: 2025-09-11 11:29 IST

Photo | deccanherald

ಗುವಾಹಟಿ: ಮಣಿಪುರದಲ್ಲಿ ದೀರ್ಘಕಾಲದಿಂದ ಮುಂದುವರೆದಿರುವ ಮೈತೈ-ಕುಕಿ ಸಂಘರ್ಷದ ನಡುವೆ ಪ್ರಧಾನಿ ನರೇಂದ್ರ ಮೋದಿ ಸೆಪ್ಟೆಂಬರ್ 13ರಂದು ಮೊದಲ ಬಾರಿಗೆ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಕಣಿವೆ ಮೂಲದ ಆರು ಬಂಡುಕೋರ ಸಂಘಟನೆಗಳ  ಸಮನ್ವಯ ಸಮಿತಿ (ಕಾರ್ಕಾಮ್) ಪ್ರಧಾನಿಯವರ ಭೇಟಿಗೆ ಬಹಿಷ್ಕಾರ ಘೋಷಿಸಿದ್ದು, ಕುಕಿ ಸಂಘಟನೆಗಳು ಇದನ್ನು ಅಪರೂಪ ಹಾಗೂ ಐತಿಹಾಸಿಕ ಕ್ಷಣ ಎಂದು ಕರೆದಿವೆ.

ಕಾರ್ಕಾಮ್ ಮಾಧ್ಯಮಗಳಿಗೆ ಕಳುಹಿಸಿದ ಪ್ರಕಟನೆಯಲ್ಲಿ, “ಮೋದಿ ಮಣಿಪುರ ಪ್ರವೇಶಿಸುವ ದಿನ ಬೆಳಿಗ್ಗೆ 1 ಗಂಟೆಯಿಂದ ಅವರು ನಿರ್ಗಮಿಸುವವರೆಗೆ ಸಂಪೂರ್ಣ ಬಂದ್ ಜಾರಿಯಲ್ಲಿರುತ್ತದೆ” ಎಂದು ತಿಳಿಸಿದೆ. ಮೇ 2023ರಿಂದ ನಡೆಯುತ್ತಿರುವ ಹಿಂಸಾತ್ಮಕ ಸಂಘರ್ಷಕ್ಕೆ ಕೇಂದ್ರ ಸರಕಾರವೇ ಹೊಣೆ ಎಂದು ಸಂಘಟನೆಗಳು ಆರೋಪಿಸಿವೆ.

ಈ ಒಕ್ಕೂಟದಲ್ಲಿ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಾರ್ಟಿ (ಕೆಸಿಪಿ), ಕಾಂಗ್ಲೀ ಯಾವೋಲ್ ಕನ್ನಾ ಲುಪ್ (ಕೆವೈಕೆಎಲ್), ಪೀಪಲ್ಸ್ ರೆವಲ್ಯೂಷನರಿ ಪಾರ್ಟಿ ಆಫ್ ಕಾಂಗ್ಲೀಪಾಕ್ (ಪಿಆರ್‌ಇಪಿಎಕೆ), ಯುನೈಟೆಡ್ ನ್ಯಾಷನಲ್ ಲಿಬರೇಶನ್ ಫ್ರಂಟ್ (ಯುಎನ್‌ಎಲ್‌ಎಫ್) ಮತ್ತು ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ಯ ರಾಜಕೀಯ ವಿಭಾಗವಾದ ರೆವಲ್ಯೂಷನರಿ ಪೀಪಲ್ಸ್ ಫ್ರಂಟ್ ಸೇರಿವೆ.

2018, 2019 ಹಾಗೂ 2022ರ ವಿಧಾನಸಭಾ ಚುನಾವಣೆಯ ಸಂದರ್ಭದವೂ ಇದೇ ರೀತಿಯ ಬಹಿಷ್ಕಾರ ಕರೆಗೆ ಈ ಸಂಘಟನೆಗಳು ಮುಂದಾಗಿದ್ದವು.

ಕುಕಿ ಸಂಘಟನೆಗಳ ಪ್ರಭಾವಿ ವೇದಿಕೆ ಮೋದಿ ಅವರ ಭೇಟಿಯನ್ನು ಸ್ವಾಗತಿಸಿದೆ. ಮೇ 2023ರಲ್ಲಿ ಸಂಘರ್ಷ ಆರಂಭವಾದ ನಂತರ ಪ್ರಧಾನಿ ರಾಜ್ಯಕ್ಕೆ ಕಾಲಿಡುತ್ತಿರುವುದು ಇದೇ ಮೊದಲ ಬಾರಿಯಾಗಿದ್ದು, “ಇದು ರಾಜ್ಯದ ಕುಕಿ ಸಮುದಾಯಕ್ಕೆ ಆಶಾದಾಯಕ ಕ್ಷಣ” ಎಂದು ಅಭಿಪ್ರಾಯ ವ್ಯಕ್ತಪಡಿಸಿವೆ.

ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ಎರಡು ಸಾರ್ವಜನಿಕ ಸಭೆಗಳನ್ನುದ್ದೇಶಿಸಿ ಮಾತನಾಡುವ ನಿರೀಕ್ಷೆಯಿದೆ. ಮೊದಲ ಕಾರ್ಯಕ್ರಮ ಕುಕಿ ಪ್ರಾಬಲ್ಯವಿರುವ ಚುರಚಂದಪುರ ಜಿಲ್ಲೆಯ ಪೀಸ್ ಗ್ರೌಂಡ್‌ನಲ್ಲಿ ಹಾಗೂ ಎರಡನೆಯದು ಇಂಫಾಲ್‌ನ ಐತಿಹಾಸಿಕ ಕಾಂಗ್ಲಾ ಕೋಟೆ ಬಳಿ ನಡೆಯಲಿದೆ.

ಸ್ಥಳೀಯ ನಾಗರಿಕ ಸಮಾಜ ಸಂಘಟನೆಗಳು ಹಾಗೂ ವಿರೋಧ ಪಕ್ಷಗಳು “ಪ್ರಧಾನಿ ಭೇಟಿ ನೀಡಿದರೆ ಮಾತ್ರ ಸಾಕಾಗುವುದಿಲ್ಲ; ಮಣಿಪುರ ಸಮಸ್ಯೆಗೆ ಕೇಂದ್ರವು ಶಾಶ್ವತ ಮತ್ತು ನೈಜ ಪರಿಹಾರ ನೀಡಬೇಕು” ಎಂದು ಒತ್ತಾಯಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News