ಸಂಸತ್ತಿನಲ್ಲಿ ಪ್ರಿಯಾಂಕಾ ಉಪಸ್ಥಿತಿಯು ಕಾಂಗ್ರೆಸ್ ಪಾಲಿಗೆ ದೊಡ್ಡ ಆಸ್ತಿಯಾಗಲಿದೆ : ಶಶಿ ತರೂರ್
Photo : PTI
ತಿರುವನಂತಪುರಂ: ಲೋಕಸಭೆಯಲ್ಲಿ ಪ್ರಿಯಾಂಕಾ ಗಾಂಧಿಯ ಉಪಸ್ಥಿತಿ ವಿರೋಧ ಪಕ್ಷಗಳ ಆಸನಗಳನ್ನು ಬಲಿಷ್ಠಗೊಳಿಸಲಿದೆ ಹಾಗೂ ವಯನಾಡ್ ಲೋಕಸಭಾ ಕ್ಷೇತ್ರದ ಜನರು ಸಂಸತ್ತಿನಲ್ಲಿ ತಮ್ಮನ್ನು ಪ್ರತಿನಿಧಿಸುವ ಬಲಿಷ್ಠ ವ್ಯಕ್ತಿಯನ್ನು ಹೊಂದಲಿದ್ದಾರೆ ಎಂದು ಮಂಗಳವಾರ ತಿರುವನಂತಪುರಂ ಸಂಸದ ಶಶಿ ತರೂರ್ ಅಭಿಪ್ರಾಯ ಪಟ್ಟಿದ್ದಾರೆ.
ನೆಯ್ಯಟ್ಟಿಕರ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದ್ದ ಧನ್ಯವಾದ ಅಭಿಯಾನದ ನೇಪಥ್ಯದಲ್ಲಿ PTI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಶಶಿ ತರೂರ್, ಚುನಾವಣಾ ಪ್ರಚಾರಗಳಲ್ಲಿ ಪ್ರಿಯಾಂಕಾ ಗಾಂಧಿ ಪರಿಣಾಮಕಾರಿ ವಾಗ್ಮಿಯಾಗಿದ್ದರು. ಅವರು ಕೇರಳದಿಂದ ಚುನಾವಣಾ ರಾಜಕಾರಣ ಪ್ರವೇಶಿಸಲು ನಿರ್ಧರಿಸಿರುವುದು ನನಗೆ ಸಂತಸ ತಂದಿದೆ ಎಂದು ಹೇಳಿದ್ದಾರೆ.
“ರಾಹುಲ್ ಗಾಂಧಿ ನಿಶ್ಚಿತವಾಗಿ ರಾಯ್ ಬರೇಲಿ ಕ್ಷೇತ್ರವನ್ನು ಉಳಿಸಿಕೊಳ್ಳಬೇಕಿತ್ತು. ಇದು ಉತ್ತರ ಪ್ರದೇಶ ಹಾಗೂ ಸಾಮಾನ್ಯವಾಗಿ ಉತ್ತರ ಭಾರತಕ್ಕೆ ರವಾನಿಸಿರುವ ಬಹುಮುಖ್ಯ ಸಂಕೇತವಾಗಿದೆ” ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.
“ಇದೇ ವೇಳೆ, ನಾನು ವಯನಾಡ್ ಕ್ಷೇತ್ರದ ಜನತೆಯನ್ನು ಕೈಬಿಡುತ್ತಿದ್ದೇನೆ ಎಂದು ಅವರಿಗೆ ಅನ್ನಿಸಬಾರದಿತ್ತು ಹಾಗೂ ತಮ್ಮ ಕ್ಷೇತ್ರವನ್ನು ತಮ್ಮ ಸಹೋದರಿಗೇ ವಹಿಸಿರುವುದು ಉತ್ತಮ ನಿರ್ಧಾರವಾಗಿದೆ. ಹೀಗಾಗಿ ಇದೊಂದು ಅದ್ಭುತ ನಿರ್ಧಾರ ಎಂದು ನನಗನ್ನಿಸುತ್ತಿದೆ” ಎಂದು ಅವರು ಹೇಳಿದ್ದಾರೆ.
ವಾರಣಾಸಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿಯು ತೋರಿರುವ ಸಾಧನೆಯನ್ನು ಪರಿಗಣಿಸಿದಾಗ, ಪ್ರಿಯಾಂಕಾ ಗಾಂಧಿ ವಾರಣಾಸಿ ಕ್ಷೇತ್ರದಿಂದಲೂ ಅದ್ಭುತ ಅಭ್ಯರ್ಥಿಯಾಗಿರುತ್ತಿದ್ದರು ಎಂದೂ ಅವರು ಹೇಳಿದ್ದಾರೆ.