×
Ad

ಸಿಖ್ ಹತ್ಯಾಕಾಂಡ: ಸಜ್ಜನ್ ಕುಮಾರ್ ಗೆ ಮರಣ ದಂಡನೆ ವಿಧಿಸಲು ಪ್ರಾಸಿಕ್ಯೂಷನ್ ಮನವಿ

Update: 2025-02-18 15:23 IST

ಸಜ್ಜನ್ ಕುಮಾರ್ (Photo: PTI)

ಹೊಸದಿಲ್ಲಿ: 1984ರ ಸಿಖ್ ಹತ್ಯಾಕಾಂಡ ಪ್ರಕರಣದಲ್ಲಿ ಕಾಂಗ್ರೆಸ್ ನ ಮಾಜಿ ಸಂಸದ ಸಜ್ಜನ್ ಕುಮಾರ್ ಗೆ ಮರಣ ದಂಡನೆ ವಿಧಿಸಬೇಕು ಎಂದು ಪ್ರಾಸಿಕ್ಯೂಷನ್ ಮನವಿ ಮಾಡಿದೆ.

ಸಾರ್ವಜನಿಕ ಅಭಿಯೋಜಕರು ನ್ಯಾಯಾಲಯಕ್ಕೆ ಇನ್ನೂ ಲಿಖಿತ ದಾಖಲೆಗಳನ್ನು ಸಲ್ಲಿಸಿಲ್ಲ. ಆದರೆ, ನಿರ್ಭಯಾ ಮತ್ತು ಇತರ ಪ್ರಕರಣಗಳಲ್ಲಿನ ಮಾರ್ಗಸೂಚಿಗಳನ್ನು ಆಧರಿಸಿ ಅವರಿಗೆ ಮರಣ ದಂಡನೆ ವಿಧಿಸಬೇಕು ಎಂದು ಮನವಿ ಮಾಡಿದ್ದಾರೆ ಎಂದು ವರದಿಯಾಗಿದೆ.

1984ರ ಸಿಖ್ ಹತ್ಯಾಕಾಂಡ ಸಂದರ್ಭದಲ್ಲಿ ನಡೆದಿದ್ದ ಕೊಲೆ ಪ್ರಕರಣವೊಂದರಲ್ಲಿ ಸಜ್ಜನ್ ಕುಮಾರ್ ಅವರನ್ನು ದೋಷಿ ಎಂದು ಫೆಬ್ರವರಿ 12ರಂದು ದಿಲ್ಲಿಯ ನ್ಯಾಯಾಲಯವೊಂದು ತೀರ್ಪು ನೀಡಿದೆ. ಶಿಕ್ಷೆಯ ಕುರಿತಾದ ವಾದಗಳನ್ನು ಆಲಿಸಲು ನ್ಯಾಯಾಲಯವು ಪ್ರಕರಣವನ್ನು ಫೆಬ್ರವರಿ 21ಕ್ಕೆ ಪಟ್ಟಿ ಮಾಡಿದೆ.

ಸಿಖ್ ಹತ್ಯಾಕಾಂಡದ ಸಂದರ್ಭದಲ್ಲಿ (ನವೆಂಬರ್ 1, 1984) ಸರಸ್ವತಿ ವಿಹಾರ್ ಬಳಿ ಜಸ್ವಂತ್ ಸಿಂಗ್ ಹಾಗೂ ಅವರ ಪುತ್ರ ತರುಣ್ ದೀಪ್ ಸಿಂಗ್ ರನ್ನು ಹತ್ಯೆಗೈಯ್ಯಲಾಗಿತ್ತು. ಈ ಪ್ರಕರಣದಲ್ಲಿ ಸಜ್ಜನ್ ಕುಮಾರ್ ಪ್ರಮುಖ ಆರೋಪಿಯಾಗಿದ್ದರು.

1984ರಲ್ಲಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಗೆ ಪ್ರತೀಕಾರವಾಗಿ ಭುಗಿಲೆದ್ದಿದ್ದ ಸಿಖ್ ಹತ್ಯಾಕಾಂಡದ ವೇಳೆ, ಮಾರಕಾಸ್ತ್ರಗಳನ್ನು ಹಿಡಿದಿದ್ದ ಜನರ ಗುಂಪು, ಸಿಖ್ ಸಮುದಾಯದವರಿಗೆ ಸೇರಿದ ಸ್ಥಳಗಳಲ್ಲಿ ಭಾರಿ ಪ್ರಮಾಣದ ಲೂಟಿ ನಡೆಸಿತ್ತು. ಗಲಭೆ ಸೃಷ್ಟಿಸಿ, ಅಪಾರ ಪ್ರಮಾಣದ ಆಸ್ತಿಪಾಸ್ತಿ, ಜೀವಹಾನಿಗೆ ಕಾರಣವಾಗಿತ್ತು. ಈ ವೇಳೆ ಮನೆಗೆ ನುಗ್ಗಿದ್ದ ಉದ್ರಿಕ್ತರು, ನನ್ನ ಪತಿ ಹಾಗೂ ಮಗನನ್ನು ಹತ್ಯೆಗೈದಿದ್ದರು. ಬಳಿಕ ಲೂಟಿಗೈದು, ಮನೆಗೆ ಬೆಂಕಿ ಹಚ್ಚಿದ್ದರು ಎಂದು ಜಸ್ವಂತ್ ಸಿಂಗ್ ಪತ್ನಿ ಸಾಕ್ಷಿ ನುಡಿದಿದ್ದಾರೆ ಎಂದು ಪ್ರಾಸಿಕ್ಯೂಷನ್ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.

ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಾಲಯವು, ಸಜ್ಜನ್ ಕುಮಾರ್ ಪ್ರಕರಣದಲ್ಲಿ ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಹೇಳಿ, ಡಿಸೆಂಬರ್ 16, 2021ರಂದು ಅವರ ವಿರುದ್ಧ ದೋಷಾರೋಪ ಪಟ್ಟಿಯನ್ನು ನಿಗದಿಗೊಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News