ಪುಣೆ | ಜೂಜಾಟದಲ್ಲಿ ತೊಡಗಿದ್ದ ಆರೋಪ ಬಿಜೆಪಿ ಪದಾಧಿಕಾರಿ ಸಹಿತ 7 ಮಂದಿ ವಶಕ್ಕೆ
ಸಾಂದರ್ಭಿಕ ಚಿತ್ರ | PC : AI
ಪುಣೆ, ಆ. 12: ಇಲ್ಲಿ ಜೂಜಾಟದಲ್ಲಿ ತೊಡಗಿದ್ದ ಆರೋಪದಲ್ಲಿ ಸ್ಥಳೀಯ ಬಿಜೆಪಿ ಪದಾಧಿಕಾರಿ ಸೇರಿದಂತೆ 6 ಮಂದಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
ಪೊಲೀಸರು ಸೋಮವಾರ ಕೈಗೊಂಡ ಕ್ರಮದ ಹಿನ್ನೆಲೆಯಲ್ಲಿ ಬಿಜೆಪಿಯ ಪುಣೆಯ ಪಾರ್ವತಿ ಘಟಕದ ಪದಾಧಿಕಾರಿ ಔದುಂಬರ್ ಕಾಂಬ್ಳೆಯನ್ನು ಘಟಕದ ಮುಖ್ಯಸ್ಥರು ವಜಾಗೊಳಿಸಿದ್ದಾರೆ.
‘‘ನಗರದ ಧಂಕವಾಡಿ ಪ್ರದೇಶದಲ್ಲಿರುವ ಟಿನ್ ಶೆಡ್ ನ ಮೇಲೆ ನಾವು ಸೋಮವಾರ ಅಪರಾಹ್ನ ದಾಳಿ ನಡೆಸಿದೆವು. ಅಲ್ಲಿ ಕೆಲವರು ಜೂಜಾಟದಲ್ಲಿ ತೊಡಗಿರುವುದು ಪತ್ತೆಯಾಯಿತು’’ ಎಂದು ಪೊಲೀಸರು ತಿಳಿಸಿದ್ದಾರೆ.
ಜೂಜಾಟದಲ್ಲಿ ತೊಡಗಿದ್ದ ಆರೋಪದಲ್ಲಿ ಔದುಂಬರ್ ಕಾಂಬ್ಳೆ, ರೋಹನ್ ಲೋಂಧೆ, ಬಾಪು ಪಾಟೋಲೆ, ಸಾಗರ್ ಅಡಗಲೆ, ಯುವರಾಜ್ ಸೂರ್ಯವಂಶಿ, ಮಹೇಶ್ ಶೆಲಾರ್ ಹಾಗೂ ಸಂಗ್ರಾಮ್ ಭೋಸಾಲೆಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅವರಿಂದ ಮೊಬೈಲ್ ಪೋನ್ ಗಳು ಹಾಗೂ 2.20 ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.