×
Ad

‘VB-G RAM G’ ಮಸೂದೆ MGNREGA ಯೋಜನೆಯ ಆತ್ಮವನ್ನೇ ದುರ್ಬಲಗೊಳಿಸುತ್ತದೆ: ಪ್ರಿಯಾಂಕಾ ಗಾಂಧಿ ಆರೋಪ

Update: 2025-12-16 16:32 IST

ಪ್ರಿಯಾಂಕಾ ಗಾಂಧಿ ವಾದ್ರಾ (File Photo: PTI)

ಹೊಸದಿಲ್ಲಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (MGNREGA) ಯನ್ನು ಬದಲಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ತಂದಿರುವ ವಿಕ್ಷಿತ್ ಭಾರತ್ ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ) — VB-G RAM G ಮಸೂದೆ, ಬಡವರಿಗೆ ಖಾತರಿಪಡಿಸಿದ್ದ ಹಕ್ಕು ಆಧಾರಿತ ಉದ್ಯೋಗ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಮಂಗಳವಾರ ಆರೋಪಿಸಿದರು.

ಸಂಸತ್ ಭವನ ಸಂಕೀರ್ಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಜನೆಗಳ ಮರುನಾಮಕರಣದ ಬಗ್ಗೆ ಮೋದಿ ಸರ್ಕಾರ ತೋರಿಸುತ್ತಿರುವ ಗೀಳು ಅರ್ಥವಾಗುವುದಿಲ್ಲ. ಮರುನಾಮಕರಣದಿಂದ ದೇಶದ ಹಣವೇ ಹೆಚ್ಚಾಗಿ ವ್ಯಯವಾಗುತ್ತದೆ. ಇದರ ಅಗತ್ಯವೇನು? ಎಂದು ಅವರು ಪ್ರಶ್ನಿಸಿದರು.

MGNREGA ಅಡಿಯಲ್ಲಿ ಬಡವರಿಗೆ ವರ್ಷಕ್ಕೆ 100 ದಿನಗಳ ಉದ್ಯೋಗವನ್ನು ಕಾನೂನುಬದ್ಧವಾಗಿ ಖಾತರಿಪಡಿಸಲಾಗಿತ್ತು. ಆದರೆ ಹೊಸ ಮಸೂದೆ ಆ ಹಕ್ಕನ್ನೇ ದುರ್ಬಲಗೊಳಿಸುತ್ತದೆ ಎಂದು ಪ್ರಿಯಾಂಕಾ ಗಾಂಧಿ ಕಳವಳ ವ್ಯಕ್ತಪಡಿಸಿದರು.

“ಕೆಲಸದ ದಿನಗಳನ್ನು ಹೆಚ್ಚಿಸಿದಂತೆ ಮೇಲ್ನೋಟಕ್ಕೆ ತೋರಿಸಲಾಗುತ್ತಿದೆ. ಆದರೆ ವೇತನ ದರ ಹೆಚ್ಚಿಸಲಾಗಿದೆಯೇ? ವರ್ಷಗಳಿಂದ MGNREGA ಗೆ ಅನುದಾನ ಕಡಿತಗೊಳ್ಳುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಮಿಕರು ವೇತನ ಬಂದಿಲ್ಲ ಎಂದು ಹೇಳುತ್ತಿದ್ದಾರೆ,” ಎಂದು ಅವರು ಉಲ್ಲೇಖಿಸಿದರು.

ಈ ಹಿಂದೆ ಕೆಲಸಗಳ ಆಯ್ಕೆ ಹಾಗೂ ಅನುದಾನ ಹಂಚಿಕೆಯ ಅಧಿಕಾರ ಗ್ರಾಮ ಪಂಚಾಯಿತಿಗಳ ಕೈಯಲ್ಲಿತ್ತು. ಆದರೆ ಹೊಸ ಮಸೂದೆಯು ಆ ಅಧಿಕಾರವನ್ನು ಕೇಂದ್ರ ಸರ್ಕಾರದ ಕೈಗೆ ಕೇಂದ್ರೀಕರಿಸುತ್ತದೆ ಎಂದು ಅವರು ಆಕ್ಷೇಪಿಸಿದರು. “ಹಣವನ್ನು ಎಲ್ಲಿ ಹಂಚಬೇಕು, ಕೆಲಸವನ್ನು ಎಲ್ಲಿ ಮಾಡಬೇಕು ಎಂಬ ನಿರ್ಧಾರವನ್ನು ಗ್ರಾಮ ಪಂಚಾಯಿತಿಗಳಿಂದ ಕಸಿದುಕೊಳ್ಳಲಾಗುತ್ತಿದೆ. ಇದು ವಿಕೇಂದ್ರೀಕರಣದ ತತ್ವಕ್ಕೆ ವಿರುದ್ಧ,” ಎಂದು ವಯನಾಡ್ ಸಂಸದೆ ಅಭಿಪ್ರಾಯಪಟ್ಟರು.

MGNREGA ಯನ್ನು ಬದಲಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಮಹಾತ್ಮ ಗಾಂಧಿಯವರ ಹೆಸರನ್ನು ಅಳಿಸುವುದು ರಾಷ್ಟ್ರಪಿತನಿಗೆ ಗೌರವ ಸಲ್ಲಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ನೀಡುವ ಹೇಳಿಕೆಗಳ ಟೊಳ್ಳುತನವನ್ನು ತೋರಿಸುತ್ತದೆ ಎಂದು ಪಕ್ಷ ಆರೋಪಿಸಿದೆ. VB-G RAM G ಮಸೂದೆ ಹಕ್ಕು ಆಧಾರಿತ ಗ್ಯಾರಂಟಿಯ ಆತ್ಮದ ಮೇಲೆ ದಾಳಿ ಮಾಡುತ್ತದೆ ಹಾಗೂ ಅದನ್ನು ರಾಜ್ಯಗಳು ಮತ್ತು ಕಾರ್ಮಿಕರ ವಿರುದ್ಧ ಷರತ್ತುಬದ್ಧ, ಕೇಂದ್ರೀಕೃತ ನಿಯಂತ್ರಿತ ಯೋಜನೆಯೊಂದಿಗೆ ಬದಲಾಯಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ.

ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆಯನ್ನು ಲೋಕಸಭೆಯಲ್ಲಿ ಮಂಡಿಸಲು ಸರ್ಕಾರ ನಿರ್ಧರಿಸಿದೆ. ಮಸೂದೆ ಪ್ರಕಾರ, ಪ್ರತಿಯೊಂದು ಹಣಕಾಸು ವರ್ಷದಲ್ಲಿ 125 ದಿನಗಳ ಕೂಲಿ ಉದ್ಯೋಗದ ಶಾಸನಬದ್ಧ ಖಾತರಿ ನೀಡಲಾಗುತ್ತದೆ. ಕಾಯ್ದೆ ಜಾರಿಗೆ ಬಂದ ಆರು ತಿಂಗಳೊಳಗೆ ರಾಜ್ಯಗಳು ಹೊಸ ಕಾನೂನಿನ ನಿಬಂಧನೆಗಳಿಗೆ ಅನುಗುಣವಾಗಿ ಯೋಜನೆ ರೂಪಿಸಬೇಕಾಗುತ್ತದೆ.

ಆರ್ಥಿಕ ಹೊಣೆಗಾರಿಕೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಂಚಿಕೊಳ್ಳಲಿದ್ದು, ಈಶಾನ್ಯ ಹಾಗೂ ಹಿಮಾಲಯನ್ ರಾಜ್ಯಗಳಿಗೆ 90:10 ಮತ್ತು ಇತರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ 60:40 ಅನುಪಾತ ಅನ್ವಯವಾಗಲಿದೆ. ಶಾಸನಾಂಗವಿಲ್ಲದ ಕೇಂದ್ರಾಡಳಿತ ಪ್ರದೇಶಗಳಿಗೆ ಸಂಪೂರ್ಣ ವೆಚ್ಚವನ್ನು ಕೇಂದ್ರವೇ ಭರಿಸಲಿದೆ. ಪ್ರಸ್ತುತ MGNREGS ಶೇಕಡ 100ರಷ್ಟು ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News