×
Ad

ಇಂಡೋನೇಶ್ಯ ಓಪನ್ ಬ್ಯಾಡ್ಮಿಂಟನ್ ಟೂರ್ನಿ | ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಮುಗ್ಗರಿಸಿದ ಪಿ.ವಿ. ಸಿಂಧು

Update: 2025-06-05 21:57 IST

ಪಿ.ವಿ. ಸಿಂಧು | PC : PTI 

ಜಕಾರ್ತ: ಥಾಯ್ಲೆಂಡ್ ನ ಪೋರ್ನ್‌ಪವೀ ಚೋಚುವಾಂಗ್ ವಿರುದ್ಧ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಸೋತಿರುವ ಭಾರತದ ಹಿರಿಯ ಆಟಗಾರ್ತಿ ಪಿ.ವಿ. ಸಿಂಧು 2025ರ ಆವೃತ್ತಿಯ ಇಂಡೋನೇಶ್ಯ ಬ್ಯಾಡ್ಮಿಂಟನ್ ಟೂರ್ನಿಯಿಂದ ನಿರ್ಗಮಿಸಿದ್ದಾರೆ.

ಗುರುವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಿ-ಕ್ವಾರ್ಟರ್ ಫೈನಲ್ ನಲ್ಲಿ ಉತ್ತಮ ಆರಂಭ ಪಡೆದಿರುವ ಸಿಂಧು 10-16 ಹಿನ್ನಡೆಯಿಂದ ಚೇತರಿಸಿಕೊಂಡು ಮೊದಲ ಗೇಮ್ ಗೆದ್ದುಕೊಂಡರು. ತಕ್ಷಣವೇ ತಿರುಗಿಬಿದ್ದ ಚೋಚುವಾಂಗ್ 10 ಅಂಕದಿಂದ ಮುನ್ನಡೆ ಸಾಧಿಸಿದ್ದಲ್ಲದೆ, 21-10 ಅಂತರದಿಂದ 2ನೇ ಗೇಮ್ ನಲ್ಲಿ ಜಯಶಾಲಿಯಾದರು.

3ನೇ ಹಾಗೂ ಅಂತಿಮ ಗೇಮ್ ನಲ್ಲಿ ಉಭಯ ಆಟಗಾರ್ತಿಯರ ನಡುವೆ ತೀವ್ರ ಸ್ಪರ್ಧೆ ಕಂಡುಬಂದಿದ್ದು ಕೊನೆಯ ಹಂತದಲ್ಲಿ ಮುನ್ನಡೆ ಸಾಧಿಸಿರುವ ಚೋಚುವಾಂಗ್ 21-18 ಗೇಮ್‌ಗಳ ಅಂತರದಿಂದ ಜಯ ದಾಖಲಿಸಿದರು.

ಮಹಿಳೆಯರ ಡಬಲ್ಸ್ ಜೋಡಿ ಟ್ರೀಸಾ ಜೋಲಿ ಹಾಗೂ ಗಾಯತ್ರಿ ಗೋಪಿಚಂದ್ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಜಪಾನಿನ ಯುಕಿ ಫುಕುಶಿಮಾ ಹಾಗೂ ಮಯು ಮಟ್ಸುಮೊಟೊ ವಿರುದ್ಧ 13-21, 22-24 ಗೇಮ್‌ಗಳ ಅಂತರದಿಂದ ಜಯ ಸಾಧಿಸಿದರು.

ಪುರುಷರ ಡಬಲ್ಸ್ ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಕಣದಲ್ಲಿದ್ದು, ಭಾರತದ ಅಭಿಯಾನವನ್ನು ಮುಂದುವರಿಸಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News