ಮಣಿಪುರದಲ್ಲಿ ಸರಕಾರ ರಚನೆಗೆ 44 ಶಾಸಕರ ಬೆಂಬಲ: ಬಿಜೆಪಿ ನಾಯಕ ರಾಧೆಶ್ಯಾಮ್ ಸಿಂಗ್ ಘೋಷಣೆ
ಬಿಜೆಪಿ ಶಾಸಕ ಥೊಕ್ ಚೋಮ್ ರಾಧೆಶ್ಯಾಮ್ ಸಿಂಗ್ | PC : Facebook/@Thokchom Radheshyam
ಹೊಸದಿಲ್ಲಿ: ರಾಷ್ಟ್ರಪತಿ ಆಳ್ವಿಕೆಗೆ ಒಳಗಾಗಿರುವ ಮಣಿಪುರದಲ್ಲಿ ಬುಧವಾರ ಮಹತ್ವದ ರಾಜಕೀಯ ಬೆಳವಣಿಗೆಯುಂಟಾಗಿದ್ದು, ರಾಜ್ಯದ 44 ಶಾಸಕರು ನೂತನ ಸರಕಾರ ರಚನೆಗೆ ಸಿದ್ಧರಾಗಿದ್ದಾರೆಂದು ಬಿಜೆಪಿ ಶಾಸಕ ಥೊಕ್ ಚೋಮ್ ರಾಧೆಶ್ಯಾಮ್ ಸಿಂಗ್ ಬುಧವಾರ ತಿಳಿಸಿದ್ದಾರೆ.
ಮಣಿಪುರ ವಿಧಾನಸಭೆಯ 9 ಮಂದಿ ಶಾಸಕರೊಂದಿಗೆ ಇಂಫಾಲದ ರಾಜಭವನದಲ್ಲಿ ರಾಜ್ಯಪಾಲ ಅಜಯ್ ಕುಮಾರ್ ಭಲ್ಲಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ ಬಳಿಕ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದ್ದಾರೆ.
ಸಾರ್ವಜನಿಕ ಭಾವನೆಗಳಿಗೆ ಅನುಗುಣವಾಗಿ ನೂತನ ಸರಕಾರ ರಚನೆಗೆ ತಾವು ತಯಾರಿದ್ದೇವೆ. ಸರಕಾರ ರಚನೆಗೆ 44 ಶಾಸಕರು ಸಿದ್ಧರಿದ್ದಾರೆಂದು ರಾಜ್ಯಪಾಲರಿಗೆ ನಾವು ಮಾಹಿತಿ ನೀಡಿದ್ದೇವೆ. ರಾಜ್ಯದಲ್ಲಿನ ಪ್ರಸಕ್ತ ಸಮಸ್ಯೆಗಳಿಗೆ ಸಂಭಾವ್ಯ ಪರಿಹಾರಗಳ ಕುರಿತಾಗಿಯೂ ತಾವು ರಾಜ್ಯಪಾಲರೊಂದಿಗೆ ಚರ್ಚಿಸಿದ್ದಾಗಿ ರಾಧೆಶ್ಯಾಮ್ ಸಿಂಗ್ ಅವರು ತಿಳಿಸಿದ್ದಾರೆ.
2023ರಲ್ಲಿ ಭುಗಿಲೆದ್ದ ಮೈತೆಯಿ ಹಾಗೂ ಕುಕಿ ರೆ ಸಮುದಾಯಗಳ ನಡುವಿನ ಹಿಂಸಾ ಚಾರವನ್ನು ನಿಯಂತ್ರಿಸುವಲ್ಲಿ ತನ್ನ ಸರಕಾರದ ವೈಫಲ್ಯದ ಬಗ್ಗೆ ತೀವ್ರ ಟೀಕೆಗಳು ವ್ಯಕ್ತವಾದ ಬಳಿಕ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಮೇ 2023ರಲ್ಲಿ ಭುಗಿಲೆದ್ದ ಜನಾಂಗೀಯ ಸಂಘರ್ಷದ ಬಳಿಕ 250ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಸಾವಿರಾರು ಮಂದಿ ನಿರ್ವಸಿತರಾಗಿದ್ದಾರೆ.
ಮಣಿಪುರ ವಿಧಾನಸಭೆಯ 60 ಸ್ಥಾನಗಳ ಪೈಕಿ ಪ್ರಸಕ್ತ ಒಂದು ಸ್ಥಾನವು ಖಾಲಿಬಿದ್ದಿದೆ. ಬಿಜೆಪಿ ನೇತೃತ್ವದ ಮೈತ್ರಿಕೂಟವು 32 ಮೈತೆಯಿ ಶಾಸಕರು, ಮೂವರು ಮಣಿಪುರಿ ಮುಸ್ಲಿಂ ಶಾಸಕರು ಹಾಗೂ 9 ಮಂದಿ ನಾಗಾ ಶಾಸಕರನ್ನು ಒಳಗೊಂಡಿದೆ.
ಕಾಂಗ್ರೆಸ್ ಪಕ್ಷವು ಮೈತೆಯಿ ಪಂಗಡದ ಐವರು ಶಾಸಕರನ್ನು ಹೊಂದಿದೆ. ಇತರ ಹತ್ತು ಮಂದಿ ಶಾಸಕರು ಕುಕಿ ಪಂಗಡದವರಾಗಿದ್ದು ಅವರಲ್ಲಿ ಏಳು ಮಂದಿ ಬಿಜೆಪಿ ಬಂಡುಕೋರರು. ಇನ್ನಿಬ್ಬರು ಕುಕಿ ಜನತಾ ಮೈತ್ರಿಕೂಟಕ್ಕೆ ಸೇರಿದವರು ಹಾಗೂ ಇನ್ನೋರ್ವ ಪಕ್ಷೇತರ ಶಾಸಕ.