ವಾರಾಣಸಿ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟ್ ಮೊರೆ ಹೋದ ರಾಹುಲ್ ಗಾಂಧಿ
PC : PTI
ಪ್ರಯಾಗ್ ರಾಜ್: 2024ರಲ್ಲಿ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ತಾವು ಸಿಖ್ಖರ ಕುರಿತು ನೀಡಿದ್ದ ಹೇಳಿಕೆಯ ಕುರಿತು ಎಫ್ಐಆರ್ ದಾಖಲಿಸುವ ಸಂಬಂಧ ಹೊಸದಾಗಿ ವಿಚಾರಣೆ ನಡೆಸುವಂತೆ ತನ್ನ ಅಧೀನ ನ್ಯಾಯಾಲಯಕ್ಕೆ ವಾರಾಣಸಿಯ ವಿಶೇಷ ಸಂಸದ-ಶಾಸಕರ ನ್ಯಾಯಾಲಯ ಆದೇಶಿಸಿರುವುದನ್ನು ಪ್ರಶ್ನಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಅಲಹಾಬಾದ್ ಹೈಕೋರ್ಟ್ ಮೊರೆ ಹೋಗಿದ್ದಾರೆ.
ಸೆಪ್ಟೆಂಬರ್ 1ರಂದು ನ್ಯಾ. ಸಮೀರ್ ಜೈನ್ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಈ ಅರ್ಜಿ ವಿಚಾರಣೆಗೆ ಬರಲಿದೆ.
ಅಮೆರಿಕದಲ್ಲಿ ರಾಹುಲ್ ಗಾಂಧಿ ಮಾಡಿದ್ದ ಭಾಷಣವನ್ನು ಪರಿಗಣಿಸಿ, ಅವರ ವಿರುದ್ಧ ಎಫ್ಐಆರ್ ದಾಖಲಿಸಬೇಕು ಎಂದು ಕೋರಿ ನಾಗೇಶ್ವರ್ ಮಿಶ್ರಾ ಎಂಬುವವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯದ ವ್ಯಾಪ್ತಿಯ ಹೊರಗಿನದ್ದು ಎಂದು ಅಭಿಪ್ರಾಯ ಪಟ್ಟಿದ್ದ ವಾರಾಣಸಿಯ ಹೆಚ್ಚುವರಿ ಮುಖ್ಯಸ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸಂಸದ-ಶಾಸಕ), ಅರ್ಜಿಯನ್ನು ವಿಚಾರಣೆಗೆ ಅಂಗೀಕರಿಸಲು ನಿರಾಕರಿಸಿದ್ದರು.
ಈ ಆದೇಶವನ್ನು ಪ್ರಶ್ನಿಸಿ ಅರ್ಜಿದಾರ ನಾಗೇಶ್ವರ್ ಮಿಶ್ರಾ ಸೆಷನ್ಸ್ ಕೋರ್ಟ್ ಮತ್ತು ವಿಶೇಷ ನ್ಯಾಯಾಧೀಶ(ಸಂಸದ-ಶಾಸಕ)ರ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಈ ಮೇಲ್ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅರ್ಜಿಯನ್ನು ಹೊಸದಾಗಿ ವಿಚಾರಣೆ ನಡೆಸುವಂತೆ ಹೆಚ್ಚುವರಿ ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರಿಗೆ ಸೂಚಿಸಿತ್ತು.
ಈ ಆದೇಶದ ವಿರುದ್ಧ ಅಲಹಾಬಾದ್ ನ್ಯಾಯಾಲಯದಲ್ಲಿ ಪರಾಮರ್ಶೆ ಅರ್ಜಿ ಸಲ್ಲಿಸಿರುವ ರಾಹುಲ್ ಗಾಂಧಿ, “ವಿಶೇಷ ನ್ಯಾಯಾಲಯದ ಆದೇಶವು ತಪ್ಪು, ಕಾನೂನುಬಾಹಿರ ಹಾಗೂ ವ್ಯಾಪ್ತಿ ಮೀರಿದ್ದಾಗಿದೆ” ಎಂದು ವಾದಿಸಿದ್ದಾರೆ.
ಸೆಪ್ಟೆಂಬರ್ 2024ರಲ್ಲಿ ಅಮೆರಿಕದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಸಿಖ್ಖರ ಪಾಲಿಗೆ ಭಾರತದಲ್ಲಿನ ವಾತಾವರಣ ಉತ್ತಮವಾಗಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದರು. ರಾಹುಲ್ ಗಾಂಧಿಯವರ ಈ ಹೇಳಿಕೆಯು ಪ್ರಚೋದನಾಕಾರಿ ಹಾಗೂ ವಿಭಜನಾಕಾರಿಯಾಗಿದೆ ಎಂದು ಆಗ ಆರೋಪಿಸಲಾಗಿತ್ತು ಹಾಗೂ ಈ ಹೇಳಿಕೆಯ ವಿರುದ್ಧ ಪ್ರತಿಭಟನೆಗಳೂ ನಡೆದಿದ್ದವು.
ರಾಹುಲ್ ಗಾಂಧಿ ಅವರ ಈ ಹೇಳಿಕೆಯ ವಿರುದ್ಧ ವಾರಾಣಸಿ ನಿವಾಸಿ ನಾಗೇಶ್ವರ್ ಮಿಶ್ರಾ ಎಂಬುವವರು ಸಾರಾನಾಥ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲು ಪ್ರಯತ್ನಿಸಿದ್ದರು. ಆದರೆ, ಅದರಲ್ಲಿ ವಿಫಲವಾಗಿದ್ದರಿಂದ, ಅವರು ರಾಹುಲ್ ಗಾಂಧಿ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿದ್ದರು.