×
Ad

ಸದನದಲ್ಲಿ ಭಾಷಣಕ್ಕೆ ತಡೆ: ಸ್ಪೀಕರ್ ಗೆ ಪತ್ರ ಬರೆದು ಪ್ರತಿಭಟನೆ ಸಲ್ಲಿಸಿದ ರಾಹುಲ್ ಗಾಂಧಿ

Update: 2026-02-04 08:10 IST

PC: PTI

ಹೊಸದಿಲ್ಲಿ: ರಾಷ್ಟ್ರಪತಿ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಬಗೆಗಿನ ಚರ್ಚೆಯ ವೇಳೆ ತಮ್ಮ ಭಾಷಣಕ್ಕೆ ತಡೆ ಒಡ್ಡಿರುವ ಕ್ರಮದ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯವರು ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರ ಬರೆದು ಪ್ರತಿಭಟನೆ ಸಲ್ಲಿಸಿದ್ದಾರೆ.

ತಾವು ಉಲ್ಲೇಖಿಸಲು ಬಯಸಿದ ನಿಯತಕಾಲಿಕವನ್ನು ಪ್ರಮಾಣೀಕರಿಸುವಂತೆ ಸ್ಪೀಕರ್ ಓಂ ಬಿರ್ಲಾ ಅವರು ಸೂಚಿಸಿದ ಹಿನ್ನೆಲೆಯಲ್ಲಿ ಆ ದಾಖಲೆಯನ್ನು ಪ್ರಮಾಣೀಕರಿಸಿ ಇಂದು ಭಾಷಣ ಮುಂದುವರಿಸುತ್ತಿದ್ದೇನೆ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಸ್ಪೀಕರ್ ಗೆ ಪತ್ರ ಬರೆದಿದ್ದಾರೆ.

ಮಂಗಳವಾರ ನಡೆದ ಚರ್ಚೆಯ ವೇಳೆ ರಾಹುಲ್ ಗಾಂಧಿ ಅವರು ಉಲ್ಲೇಖಿಸಲು ಬಯಸಿದ್ದ ನಿಯತಕಾಲಿಕವನ್ನು ಪ್ರಮಾಣೀಕರಿಸುವಂತೆ ಸೂಚಿಸಿ ಭಾಷಣಕ್ಕೆ ಸ್ಪೀಕರ್ ತಡೆಯೊಡ್ಡಿದ್ದರು. ಈ ಹಿಂದೆ ನಡೆದುಕೊಂಡು ಬಂದ ಸಂಪ್ರದಾಯದಂತೆ ಹಾಗೂ ಹಿಂದಿನ ಸ್ಪೀಕರ್ ಗಳ ರೂಲಿಂಗ್ ನಂತೆ ಒಬ್ಬ ಸದಸ್ಯ ಒಂದು ದಾಖಲೆಯನ್ನು ಉಲ್ಲೇಖಿಸಲು ಬಯಸಿದರೆ ಸದನ ಅದನ್ನು ಪ್ರಮಾಣೀಕರಿಸಬೇಕು ಮತ್ತು ಅದರ ಅಂಶಗಳ ಹೊಣೆಗಾರಿಕೆಯನ್ನು ದೃಢಪಡಿಸಬೇಕು. ಈ ಅಗತ್ಯತೆ ಈಡೇರಿದ ಬಳಿಕ ಸ್ಪೀಕರ್, ಆ ಸದಸ್ಯ ಆ ದಾಖಲೆಯನ್ನು ಉಲ್ಲೇಖಿಸಬಹುದಾಗಿದೆ. ಆ ಬಳಿಕ ಇದಕ್ಕೆ ಪ್ರತಿಕ್ರಿಯಿಸುವುದು ಸರ್ಕಾರದ ಜವಾಬ್ದಾರಿ. ಸ್ಪೀಕರ್ ಪಾತ್ರ ಅಲ್ಲಿಗೆ ಮುಕ್ತಾಯವಾಗುತ್ತದೆ ಎಂದು ವಿವರಿಸಿದ್ದಾರೆ.

ಲೋಕಸಭೆಯಲ್ಲಿ ಮಾತನಾಡಲು ತಡೆ ಒಡ್ಡುವುದರಿಂದ ಈ ಸಂಪ್ರದಾಯವನ್ನು ಉಲ್ಲಂಘಿಸಿದಂತಾಗುವುದು ಮಾತ್ರವಲ್ಲದೇ, ವಿರೋಧ ಪಕ್ಷದ ನಾಯಕನಾಗಿರುವ ನಾನು ರಾಷ್ಟ್ರೀಯ ಭದ್ರತೆಯ ವಿಚಾರದ ಬಗ್ಗೆ ಮಾತನಾಡದಂತೆ ನನ್ನನ್ನು ತಡೆಯಲು ಮಾಡಿದ ಉದ್ದೇಶಪೂರ್ವಕ ಪ್ರಯತ್ನದ ಬಗ್ಗೆ ಗಂಭೀರ ಕಳವಳಕ್ಕೂ ಕಾರಣವಾಗುತ್ತದೆ. ರಾಷ್ಟ್ರೀಯ ಭದ್ರತೆಯು ರಾಷ್ಟ್ರಪತಿಗಳ ಭಾಷಣದ ಪ್ರಮುಖ ಅಂಶ ಎನ್ನುವುದನ್ನು ಒತ್ತಿ ಹೇಳಲು ಬಯಸುತ್ತೇನೆ ಹಾಗೂ ಸಂಸತ್ತಿನಲ್ಲಿ ಈ ಬಗ್ಗೆ ಚರ್ಚೆ ನಡೆಯಬೇಕು ಎಂದು ವಾದಿಸಿದ್ದಾರೆ.

ಸದನದ ನಿಷ್ಪಕ್ಷಪಾತ ರಕ್ಷಕರಾಗಿ ನೀವು ಕಾರ್ಯನಿರ್ವಹಿಸವುದು ನಿಮ್ಮ ಸಂವಿಧಾನಾತ್ಮಕ ಮತ್ತು ಸಂಸದೀಯ ಜವಾಬ್ದಾರಿ. ವಿರೋಧ ಪಕ್ಷದ ಸದಸ್ಯ ಸೇರಿದಂತೆ ಪ್ರತಿಯೊಬ್ಬರ ಹಕ್ಕುಗಳನ್ನು ನೀವು ರಕ್ಷಿಸಬೇಕು. ವಿರೋಧ ಪಕ್ಷದ ನಾಯಕ ಮತ್ತು ಪ್ರತಿಯೊಬ್ಬ ಸದಸ್ಯರು ಮಾತನಾಡುವುದು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ ಎಂದು ರಾಹುಲ್‌ ಗಾಂಧಿ ವಿವರಿಸಿದ್ದಾರೆ.

ಮೂಲಭೂತ ಪ್ರಜಾಸತ್ತಾತ್ಮಕ ಹಕ್ಕುಗಳನ್ನು ತಿರಸ್ಕರಿಸುವುದು ಹಿಂದೆಂದೂ ಕಂಡರಿಯದ ಪರಿಸ್ಥಿತಿಗೆ ಕಾರಣವಾಗುತ್ತೆ, ಸಂಸತ್ತಿನ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರದ ಸೂಚನೆಯಂತೆ ರಾಷ್ಟ್ರಪತಿಗಳ ಭಾಷಣದ ಬಗ್ಗೆ ಮಾತನಾಡದಂತೆ ವಿರೋಧ ಪಕ್ಷದ ನಾಯಕನನ್ನು ತಡೆಯುವಂತೆ ಬಲವಂತಪಡಿಸಲಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ, ಇದನ್ನು ಕಟುವಾಗಿ ಪ್ರತಿಭಟಿಸುತ್ತೇನೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News