×
Ad

ರಾಜ್ ಠಾಕ್ರೆ ಪಕ್ಷದ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರು; ಸೂಚಿಸಿದ ಮಾರ್ಗದಲ್ಲಿ ರ‍್ಯಾಲಿ ನಡೆಸಲಿಲ್ಲ ಎಂದ ಸಿಎಂ ದೇವೇಂದ್ರ ಫಡ್ನವಿಸ್

Update: 2025-07-08 17:54 IST

PC: indiatoday.in

ಮುಂಬೈ: ಮರಾಠಿ ಮಾತನಾಡಲಿಲ್ಲವೆಂದು ಸಿಹಿ ತಿನಿಸು ಮಾರಾಟ ಮಳಿಗೆಯೊಂದರ ಮಾಲಕನ ಮೇಲೆ ಹಲ್ಲೆ ನಡೆಸಿದ್ದನ್ನು ಪ್ರತಿಭಟಿಸಿ ಮಹಾರಾಷ್ಟ್ರದಾದ್ಯಂತ ವರ್ತಕರು ಪ್ರತಿಭಟನೆ ನಡೆಸಿದ್ದಕ್ಕೆ ಪ್ರತಿಯಾಗಿ ಮಂಗಳವಾರ ರ‍್ಯಾಲಿ ನಡೆಸಿದ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಥಾಣೆ ಜಿಲ್ಲೆಯ ಮೀರಾ ಭಯಾಂಡರ್ ಪ್ರದೇಶದಲ್ಲಿ ನಡೆದ ಈ ರ‍್ಯಾಲಿಯಿಂದ, ಈ ಪ್ರದೇಶದ ಜನಜೀವನ ಅಕ್ಷರಶಃ ಸ್ತಬ್ಧಗೊಂಡಿತು. ಈ ರ‍್ಯಾಲಿಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಭಾರಿ ಪ್ರಮಾಣದಲ್ಲಿ ಪೊಲೀಸರನ್ನು ನಿಯೋಜಿಸಿ, ರಸ್ತೆ ತಡೆಗೋಡೆಗಳನ್ನು ಅಡ್ಡ ಹಾಕಿದ್ದರಿಂದ, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಈ ಮಾರ್ಗದಲ್ಲಿ ರ‍್ಯಾಲಿ ನಡೆಸಲು ಯಾವುದೇ ಪೂರ್ವಾನುಮತಿ ಪಡೆಯದಿದ್ದರೂ, ಈ ಮಾರ್ಗವಾಗಿ ಮುಂಬೈಗೆ ಪಾದಯಾತ್ರೆ ನಡೆಸುವ ಯೋಜನೆಯನ್ನು ಮಹಾರಾಷ್ಟ್ರ ನವನಿರ್ಮಾಣ ವೇದಿಕೆಯ ಕಾರ್ಯಕರ್ತರು ಹೊಂದಿದ್ದರು. ಆದರೆ, ಮಂಗಳವಾರ ಬೆಳ್ಳಂಬೆಳಗ್ಗೆಯೇ ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಥಾಣೆ ಹಾಗೂ ಪಾಲ್ಘರ್ ಘಟಕಗಳ ಮುಖ್ಯಸ್ಥ ಅವಿನಾಶ್ ಜಾಧವ್ ಹಾಗೂ ಇನ್ನಿತರ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದರಿಂದ, ಅವರ ಯೋಜನೆಗಳೆಲ್ಲ ತಲೆಕೆಳಗಾಯಿತು.

ಆದರೆ, ಈ ಕುರಿತು ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, "ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಕಾರ್ಯಕರ್ತರು ಪೂರ್ವಾನುಮತಿ ಪಡೆದ ಮಾರ್ಗವನ್ನು ಅನುಸರಿಸದಿದ್ದರಿಂದ, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ" ಎಂದು ಸ್ಪಷ್ಟನೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News